

ಮುಂಬೈ: ಲಾಕ್ಡೌನ್ ಮುಗಿದು ಶೂಟಿಂಗ್ ಕೆಲಸಗಳು ಪ್ರಾರಂಭವಾಗುತ್ತಿದ್ದಂತೆಯೇ, ಆಲಿಯಾ ಸಹ ಕೆಲಸ ಶುರು ಮಾಡಿದ್ದಾರೆ. ವಿಶೇಷವೆಂದರೆ, ಅವರು ತಮ್ಮ ಎಟರ್ನಲ್ ಸನ್ಶೈನ್ ಸಂಸ್ಥೆಯಡಿ 'ಡಾರ್ಲಿಂಗ್ಸ್' ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅದರಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪ್ರಾರಂಭವಾಗಿದೆ.
ಇತ್ತೀಚೆಗಷ್ಟೇ ಚಿತ್ರೀಕರಣ ಪ್ರಾರಂಭವಾಗಿದ್ದು, ಆಲಿಯಾ ತಮ್ಮ ಕ್ಯಾರಾವಾನ್ನಲ್ಲಿ ತಯಾರಾಗುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. 'ನಿರ್ಮಾಪಕಿಯಾಗಿ ಇದು ನನ್ನ ಮೊದಲ ಚಿತ್ರ. ನಿರ್ಮಾಪಕಿಯಾದರೂ, ನಟಿಯಾಗಿಯೇ ಗುರುತಿಸಿಕೊಳ್ಳುವುದಕ್ಕೆ ನಾನು ಹೆಚ್ಚು ಇಷ್ಟಪಡುತ್ತೀನಿ' ಎಂದು ಹೇಳಿಕೊಂಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಶಾರೂಖ್ ಖಾನ್, 'ನಿನ್ನ ಮುಂದಿನ ಚಿತ್ರದಲ್ಲಿ ನನಗೊಂದು ಅವಕಾಶ ಕೊಡು ಪ್ಲೀಸ್. ಶೂಟಿಂಗ್ಗೆ ಸರಿಯಾದ ಸಮಯಕ್ಕೆ ಬರುತ್ತೀನಿ ಮತ್ತು ನೀನು ಹೇಳಿದ ಹಾಗೆ ಕೇಳಿಕೊಂಡಿರುತ್ತೀನಿ, ಪ್ರಾಮಿಸ್' ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಖುಷಿಯಾಗಿರುವ ಆಲಿಯಾ, 'ಅದಕ್ಕಿಂತ ಖುಷಿಯ ವಿಷಯ ಬೇರೇನಿದೆ? ಡೀಲ್ ಆಯ್ತು' ಎಂದು ಉತ್ತರಿಸಿದ್ದಾರೆ.
'ಡಾರ್ಲಿಂಗ್ಸ್' ಚಿತ್ರವನ್ನು ಆಲಿಯಾ, ಶಾರೂಖ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅವರ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ಜಸ್ಮೀತ್ ಕೆ ರೀನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್, ಶೆಫಾಲಿ ಷಾ, ವಿಜಯ್ ವರ್ಮಾ, ರೋಶನ್ ಮ್ಯಾಥ್ಯೂ ಮುಂತಾದವರು ನಟಿಸುತ್ತಿದ್ದಾರೆ.