ಅಮಿತಾಭ್​ ಬಚ್ಚನ್​ ಮನೆಯ ಒಂದು ಭಾಗವನ್ನು ಕೆಡವಲು ಬಿಎಂಸಿ ಸಿದ್ಧತೆ ...

Amitabh Bachchan - Final
Published on

ಮುಂಬೈ: ಮುಂಬೈನ ಜನಪ್ರಿಯ ತಾಣಗಳ ಪೈಕಿ ಅಮಿತಾಭ್​ ಬಚ್ಚನ್​ ನಿವಾಸ 'ಪ್ರತೀಕ್ಷ' ಸಹ ಒಂದು. ಈಗ ಆ ಮನೆಯ ಒಂದು ಭಾಗವನ್ನು ಕೆಡವಲು ಬೃಹತ್​ ಮುಂಬೈ ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

2017ರಲ್ಲಿ ಪಾಲಿಕೆಯು ರಸ್ತೆ ಅಗಲೀಕರಣ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸಿದಾಗ, ಅಮಿತಾಭ್​ ಸೇರಿದಂತೆ ಏಳು ಮಂದಿ, ಅನಿಧಿಕೃತ ನಿರ್ಮಾಣ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಸಂಬಂಧ, ಬೃಹತ್​ ಮುಂಬೈ ಮಹಾನಗರ ಪಾಲಿಕೆಯು ಅನಧಿಕೃತವಾಗಿ ಮನೆ ನಿರ್ಮಿಸಿದ್ದಕ್ಕಾಗಿ ನೋಟೀಸ್​ ನೀಡಿತ್ತು.

ಆದರೆ, ಆ ನಂತರ ಈ ಪ್ರಕ್ರಿಯೆ ಕಾರಣಾಂತರಗಳಿಂದ ಮುಂದುವರೆದಿರಲಿಲ್ಲ. ಈಗ ಪಾಲಿಕೆ ಸದಸ್ಯರಾದ ಟುಲಿಪ್​ ಬ್ರಿಯಾನ್​ ಮಿರಾಂಡಾ ಅವರು, ಅಮಿತಾಭ್​ ಸೇರಿದಂತೆ ಏಳು ಮಂದಿಯ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದಷ್ಟು ಬೇಗ ಅನಧಿಕೃತ ನಿರ್ಮಾಣವನ್ನು ಕೆಡವಿ, ರಸ್ತೆ ಅಗಲೀಕರಣ ಮಾಡಬೇಕು ಎಂದು ಹೋರಾಟ ನಡೆಸಿದ್ದಾರೆ. ಇದರಿಂದಾಗಿ, ಅಮಿತಾಭ್​ ಅವರ ಮನೆಯ ಒಂದು ಭಾಗವನ್ನು ಕೆಡವಬೇಕಾಗುತ್ತದೆ.

ಈ ಸಂಬಂಧ ಪಾಲಿಕೆಯು ಪ್ರಕ್ರಿಯೆ ಪ್ರಾರಂಭಿಸಿದ್ದು, ಮುಂಬೈ ಸಬ್​ಅರ್ಬನ್​ ಕಲೆಕ್ಟರ್​ ಸಿಟಿ ಸರ್ವೆ ಇಲಾಖೆಗೆ ಗಡಿರೇಖೆಯನ್ನು ನಿಗದಿಪಡಿಸುವುದಕ್ಕೆ ಸೂಚಿಸಿದೆ. ಗಡಿರೇಖೆ ತೀರ್ಮಾನವಾದ ನಂತರ, ಅಮಿತಾಭ್​ ಅವರ ಪ್ರತೀಕ್ಷಾ ಮನೆಯ ಒಂದು ಭಾಗವನ್ನು ಕೆಡವಬೇಕಾಗುತ್ತದೆ. ಈ ಪ್ರಕ್ರಿಯೆಗೆ ಇನ್ನಷ್ಟು ದಿವಸ ಆಗಲಿದ್ದು, ಅಷ್ಟರಲ್ಲಿ ಅಮಿತಾಭ್​ ಏನಾದರೂ ಮಾಡಿ, ತಮ್ಮ ಮನೆಯನ್ನು ಉಳಿಸಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net