

ಕರೊನಾ ಮತ್ತು ಲಾಕ್ಡೌನ್, ಹಿರಿತೆರೆಗೆ ಮತ್ತು ಕಿರುತೆರೆಗೆ ಯಾವ ರೀತಿ ಪೆಟ್ಟು ಕೊಟ್ಟಿದೆ ಎಂದರೆ, ಹಲವರು ಕೆಲಸ ಇಲ್ಲದೆ ಬಹಳ ಸಂಕಷ್ಟದಲ್ಲಿದ್ದಾರೆ. ಕಲಾವಿದರ ಸಂಕಷ್ಟಗಳ ಕುರಿತಾಗಿಯೇ, ಕಿರುಚಿತ್ರಗಳು ನಿರ್ಮಾಣವಾಗಿದ್ದೂ ಇದೆ.
ಜೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಹಮಾರಿ ಬಹು ಸಿಲ್ಕ್' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವಂದನಾ ವಿತ್ಲಾನಿ ಎನ್ನುವವರು ಇದೀಗ ಕೆಲಸ ವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ರಾಖಿ ಮಾಡಿ ಅದನ್ನು ಆನ್ಲೈನ್ನಲ್ಲಿ ಮಾರುತ್ತಿದ್ದಾರೆ.
'ಹಮಾರಿ ಬಹು ಸಿಲ್ಕ್' ಧಾರಾವಾಹಿಯಲ್ಲಿ ವಂದನಾ ಅವರು ಜಾನಕಿ ಜೋಷಿ ಎಂಬ ಪಾತ್ರ ಮಾಡುತ್ತಿದ್ದರು. ಇದೀಗ ಲಾಕ್ಡೌನ್ ಮತ್ತು ಕರೊನಾ ಹಾವಳಿಯಿಂದ ಚಿತ್ರೀಕರಣ ನಿಂತಿದೆ. ಮುಂದೇನೂ ಎಂಬ ಚಿಂತೆಯಲ್ಲಿದ್ದ ಅವರಿಗೆ ನೆನಪಾಗಿದ್ದು ರಾಖಿ ಹಬ್ಬ. ಹೇಗೂ, ಆಗಸ್ಟ್ ಮೂರರಂದು ಹಬ್ಬವಿದೆ. ಯಾಕೆ ರಾಖಿ ಮಾಡಿ, ಮಾರಾಟ ಮಾಡಬಾರದು ಎಂಬ ಯೋಚನೆಯೊಂದು ಬರುತ್ತಿದ್ದಂತೆಯೇ, ಅವರು ಈಗ ರಾಖಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಯಾಕೆ ಈ ಕೆಲಸ ಮಾಡಬೇಕಾಯಿತು ಎಂದು ಹೇಳಿಕೊಂಡಿರುವ ಅವರು, 'ಕಳೆದ ವರ್ಷ ಮೇ ತಿಂಗಳಿಂದ ಅಕ್ಟೋಬರ್ವರೆಗೂ ಧಾರಾವಾಹಿಯಲ್ಲಿ ನಟಿಸಿದೆ. ಮೇ ತಿಂಗಳಿಗೆ ಮಾತ್ರ ಸಂಭಾವನೆ ನೀಡಲಾಗಿದೆ. ಮಿಕ್ಕಂತೆ ಬೇರೆ ಯಾವ ತಿಂಗಳಿಗೂ ಇನ್ನೂ ಕೊಟ್ಟಿಲ್ಲ. ಅಲ್ಪಸ್ವಲ್ಪ ಕೂಡಿಟ್ಟಿದ್ದ ಹಣವೂ ಮುಕ್ತಾಯವಾಗಿದೆ. ಬೇರೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ರಾಖಿ ಮಾರುತ್ತಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.
ಇದಲ್ಲದೆ ಇನ್ನೊಂದಿಷ್ಟು ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಆಡಿಷನ್ನಲ್ಲಿ ಪಾಲ್ಗೊಂಡರೂ, ಯಾವುದೂ ಇನ್ನೂ ಶುರುವಾಗಿಲ್ಲವಂತೆ. 'ಇವೆಲ್ಲಾ ಇನ್ನೂ ಎಷ್ಟು ದಿನ ಮುಂದುವರೆಯುತ್ತದೋ ಗೊತ್ತಿಲ್ಲ. ಮನೆ ಖರ್ಚಿನ ಜತೆಗೆ ಮಕ್ಕಳ ಫೀಸ್ ಎಲ್ಲಾ ಇರುವುದರಿಂದ ಸಾಕಷ್ಟು ಕಷ್ಟವಾಗಿದೆ. ಆದಷ್ಟು ಬೇಗ ಒಂದಿಷ್ಟು ಕೆಲಸ ಸಿಕ್ಕರೆ ಸಾಕು' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.