

ಬೆಂಗಳೂರು: ಮೊಬೈಲ್ಫೋನ್ಗೆ ಸಾಮಾನ್ಯ ಜನ ಅದೆಷ್ಟು ಅಡಿಕ್ಟ್ ಆಗುತ್ತಿದ್ದಾರೆ ಎಂಬುದರ ಕುರಿತು ದಿನ ಬೆಳಗಾದರೆ ಚರ್ಚೆ ಆಗುತ್ತಲೇ ಇದೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಮಧುಚಂದ್ರ ಸದ್ದಿಲ್ಲದೆ ಒಂದು ಚಿತ್ರ ಮಾಡಿದ್ದಾರೆ. ಅದೇ ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’. ಕರೊನಾ ಮೊದಲನೇ ಅಲೆಗೂ ಮುನ್ನವೇ ಪ್ರಾರಂಭವಾದ ಈ ಚಿತ್ರ ಈಗ ಮುಗಿದು, ಇದೇ ಮೇ 13ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಈ ಹಿಂದೆ ‘ಸೈಬರ್ ಯುಗದೊಳ್’, ‘ವಾಸ್ಕೋಡಿಗಾಮ’ ಮತ್ತು ‘ರವಿ ಹಿಸ್ಟರಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಮಧುಚಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಸೆಲ್ಪಿ ಮಮ್ಮಿ’ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಅವರು, ‘ಹೊಸ ತಲೆಮಾರಿನವರು ಮೊಬೈಲ್ ಬಿಟ್ಟಿರಲಾಗದಂತಹ ಪರಿಸ್ಥಿಗೆ ಬಂದಿದ್ದಾರೆ. ಅವರ ಮೊಬೈಲ್ ಚಟ ಯಾವ ಲೆವೆಲ್ಗೆ ಹೋಗಿದೆ ಎನ್ನುವುದನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ನಮ್ಮ ಸುತ್ತಮುತ್ತ ನಡೆದ ಘಟನೆಗಳಿಂದ ಈ ಕಥೆ ಹುಟ್ಟಿದೆ’ ಎನ್ನುತ್ತಾರೆ. ಈ ಸಮಸ್ಯೆ ಭಯಂಕರ ರೂಪ ಪಡೆಯುತ್ತಿದೆ ಎನ್ನುವ ಅವರು, ‘ತಂದೆ ತಾಯಿಗೆ ಮಕ್ಕಳ ಜತೆಗೆ ಸಮಯ ಕಳೆಯುವುದಕ್ಕೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಮಕ್ಕಳು ಮೊಬೈಲ್ಗೆ ದಾಸರಾಗುತ್ತಿದ್ದಾರೆ.
ಬರೀ ಬೈದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇದಕ್ಕೆ ಪರಿಹಾರವನ್ನು ಚಿತ್ರದಲ್ಲಿ ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಮಧುಚಂದ್ರ. ಸೃಜನ್ ಲೋಕೇಶ್, ಮೇಘನಾ ರಾಜ್, ಅಚ್ಯುತ್ ಕುಮಾರ್, ದತ್ತಣ್ಣ, ಬೇಬಿ ಶ್ರೀ, ಮಾಸ್ಟರ್ ಆಲಾಪ್ ಮುಂತಾದವರು ನಟಿಸಿರುವ ಈ ಚಿತ್ರವನ್ನು 80 ಸಮಾನ ಮನಸ್ಕ ಪೋಷಕರು, ಆಕಾಶಬುಟ್ಟಿ ಸಿನಿಮಾಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರವನ್ನು ನಿರ್ವಿುಸಿರುವುದು ವಿಶೇಷ.