

ಬೆಂಗಳೂರು: ಈ ಹಿಂದೆ 'ಅಕ್ಷತೆ', 'ಗೋಸಿ ಗ್ಯಾಂಗ್' ಮತ್ತು 'ಕತ್ತಲೆಕಾಡು ಎಸ್ಟೇಟ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜು ದೇವಸಂದ್ರ, ಈಗ ಸದ್ದಿಲ್ಲದೆ ತಮ್ಮ ನಾಲ್ಕನೆಯ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಅದೇ 'ಸೆಕೆಂಡ್ ಲೈಫ್'. ಈಗಾಗಲೇ ಅವರು ಚಿತ್ರದ ಕೆಲಸ ಮುಗಿಸಿ, ಇತ್ತೀಚೆಗೆ ಟ್ರೇಲರ್ ಸಹ ಬಿಡುಗಡೆ ಮಾಡಿದ್ದಾರೆ.
'ಸೆಕೆಂಡ್ ಲೈಫ್' ಚಿತ್ರದಲ್ಲಿ ಆದರ್ಶ್ ಗುಂಡುರಾಜ್ ನಾಯಕನಾಗಿ ನಟಿಸಿದ್ದರು. ಈ ಹಿಂದೆ 'ಸ್ವಾರ್ಥರತ್ನ' ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ್ಗೆ ಇದು ಎರಡನೇ ಚಿತ್ರ. ಅವರಿಗೆ ನಾಯಕಿಯಾಗಿ ಸಿಂಧು ರಾವ್ ಇದ್ದಾರೆ. ಶಿವಪ್ರದೀಪ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜತೆಯಾಗಿ ಈ ಚಿತ್ರವನ್ನು ನಿರ್ಮಿಸಿದೆ.
ಇದನ್ನೂ ಓದಿ: ಹರೀಶ್ ರಾಜ್ @25; ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ
ಈ ಕುರಿತು ಮಾತನಾಡುವ ನಿರ್ದೇಶಕ ರಾಜು ದೇವಸಂದ್ರ, 'ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಚಿತ್ರ. ಮಂಜುಳ ರಮೇಶ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ನಾನು ನಿರ್ದೇಶನ ಮಾಡಿದ್ದೇನೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ' ಎಂದರು.
ಇದೊಂದು ವಿಭಿನ್ನ ಕಥೆ ಇರುವ ಚಿತ್ರ ಎಂದೇ ಮಾತು ಪ್ರಾರಂಭಿಸುವ ಚಿತ್ರದ ನಾಯಕ ಆದರ್ಶ್ ಗುಂಡುರಾಜ್, 'ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರಳು ಬಳ್ಳಿ (ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ' ಎನ್ನುತ್ತಾರೆ.
ಈ ಚಿತ್ರವನ್ನು ಮೊದಲು ಪುನೀತ್ ರಾಜಕುಮಾರ್ ನಿರ್ಮಿಸಬೇಕಿತ್ತಂತೆ. 'ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಈ ಸಲುವಾಗಿ ಚರ್ಚಿಸಲು ಅವರು ನಮಗೆ ಸ್ನೇಹಿತರೊಬ್ಬರ ಮೂಲಕ ಸಮಯವನ್ನು ನೀಡಿದ್ದರು. ಆದರೆ ವಿಧಿಬರಹವೇ ಬೇರೆಯಾಗಿತ್ತು. ಈಗ ನಮ್ಮ ಚಿತ್ರದ ಹಾಡು ಪಿ.ಆರ್.ಕೆ ಮೂಲಕವೇ ಬಿಡುಗಡೆಯಾಗಿರುವುದು ಖುಷಿಯ ವಿಚಾರ' ಎನ್ನುತ್ತಾರೆ ಆದರ್ಶ್.
ನಾಯಕಿ ಸಿಂಧು ರಾವ್ ಈ ಚಿತ್ರದಲ್ಲಿ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಿರ್ದೇಶಕರು ನನಗೆ ಕಥೆ ಬಗ್ಗೆ ಏನು ಹೇಳಿಲ್ಲ. ಪಾತ್ರದ ಕುರಿತು ಮಾತ್ರ ಹೇಳಿದ್ದಾರೆ' ಅಂತಷ್ಟೇ ಹೇಳುತ್ತಾರೆ ಸಿಂಧು ರಾವ್.
'ಸೆಕೆಂಡ್ ಲೈಫ್' ಚಿತ್ರಕ್ಕೆ ಆರವ್ ಕೌಶಿಕ್ ಸಂಗೀತ ಮತ್ತು ರಮೇಶ್ ಕೊಯಿರ ಅವರ ಛಾಯಾಗ್ರಹಣವಿದೆ.