

ಬೆಂಗಳೂರು: ಹರೀಶ್ ರಾಜ್ ಚಿತ್ರರಂಗದಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಮುಗಿಸಿದ್ದಾರೆ. 1997ರಲ್ಲಿ ನಟನಾಗಿ ಬಣ್ಣ ಹಚ್ಚಿದ ಅವರು, ಇದುವರೆಗೂ 60ಕ್ಕೂ ಹೆಚ್ಚು ಚಿತ್ರಗಳು ಮತ್ತು 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡವಲ್ಲದೆ, ಮಲಯಾಳಂ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. ಸಿನಿಪಯಣದ ಈ ಬೆಳ್ಳಿಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಅವರು ಪುಟ್ಟ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಿದ್ದರು. ತಮ್ಮ ಬೆಳವಣಿಗೆಗೆ ಕಾರಣರಾದ ಡಾ. ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವರನ್ನು ಕರೆದು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ದೋಣಿ ಸಾಗಲಿ’ ಮೂಲಕ ನನ್ನ ಚಿತ್ರಜೀವನ ಪ್ರಾರಂಭವಾಯಿತು. ಅದೇ ವರ್ಷ, ಕಾಸರವಳ್ಳಿ ನಿರ್ದೇಶನದ ‘ತಾಯಿ ಸಾಹೇಬ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರಲ್ಲಿ ನಾನು ಡಾ. ಜಯಮಾಲ ಅವರ ಮಗನ ಪಾತ್ರದಲ್ಲಿ ನಟಿಸಿದ್ದೆ. ಈ 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದೆ. ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾರ್ನಾಡ್ರಂತಹ ಶ್ರೇಷ್ಠ ನಿರ್ದೇಶಕರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ಹಲವರು ಕಾರಣರು’ ಎನ್ನುತ್ತಾರೆ ಹರೀಶ್ ರಾಜ್.
ಗಿರೀಶ್ ಕಾಸರವಳ್ಳಿ ಅವರಿಗೆ ಹರೀಶ್, ಸ್ನೇಹಿತರೊಬ್ಬರ ಮೂಲಕ ಪರಿಚಯವಾಯಿತಂತೆ. ‘ರಬಕವಿಯಲ್ಲಿ ‘ತಾಯಿಸಾಹೇಬ’ ಚಿತ್ರೀಕರಣ ನಡೆಯುತ್ತಿತ್ತು. ಜಯಮಾಲ, ಶಿವರಾಮಣ್ಣ ಮುಂತಾದವರು ಭಾಗವಹಿಸಿದ್ದರು. ಹರೀಶ್ ರಾಜ್ ಅವರಿಗೆ ಫೋನ್ ಮಾಡಿ, ನಾಳೆ ನಿಮ್ಮ ಪಾತ್ರದ ಚಿತ್ರೀಕರಣವಿದೆ, ರಾತ್ರಿಯೇ ಹೊರಟು ಬನ್ನಿ ಎಂದೆ. ಬೆಳಿಗ್ಗೆ ಬಂದಿದ್ದಷ್ಟೇ ಅಲ್ಲ, ಯಾವುದೇ ಆಯಾಸವಿಲ್ಲದೆ ಅಂದಿನ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗವಹಿಸಿ, ಎಲ್ಲರ ಮೆಚ್ಚುಗೆ ಪಡೆದರು. ನಂತರ ನನ್ನ ‘ದ್ವೀಪ’ ಚಿತ್ರದಲ್ಲೂ ಅವರು ನಟಿಸಿದರು. ಆ ಚಿತ್ರದ ಅಭಿನಯಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿ ರೇಸ್ನಲ್ಲಿದ್ದರು ಎಂದು ನನಗೆ ತಡವಾಗಿ ತಿಳಿಯಿತು. ಅವರೊಬ್ಬ ಒಳ್ಳೆಯ ನಟ. ಮುಂದೆ ಸಹ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ’ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮ. ಹರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಂತಾದವರು ಹಾಜರಿದ್ದರು.