ಮಿಸ್ ನಂದಿನಿ ಟ್ರೇಲರ್ ಬಿಡುಗಡೆ; ಪ್ರಿಯಾಂಕಾಗೆ ಅಭಿನಯ ಅಪ್ಸರೆ ಬಿರುದು..

Miss Nandini
Published on

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಮಿಸ್ ನಂದಿನಿ’ ಚಿತ್ರದ ಶೂಟಿಂಗ್ ಮುಗಿದಿದ್ದು ನೆನಪಿರಬಹುದು. ಈಗ ಚಿತ್ರದ ಬೇರೆ ಕೆಲಸಗಳು ಸಹ ಬಹುತೇಕ ಮುಗಿದಿದೆ. ಅದೇ ಖುಷಿಯಲ್ಲಿ ಚಿತ್ರತಂಡದವರು ಟ್ರೇಲರ್ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ‘ಮಿಸ್ ನಂದಿನಿ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಬಂದಿದ್ದರು. ಜತೆಗೆ ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಹೋರಾಡುತ್ತಿರುವ ಅಕ್ಕ ಅನು ಮತ್ತು ತಂಡ, ಹಿರಿಯ ನಟಿ ಭವ್ಯಾ, ಕೆ.ಎಸ್. ಶ್ರೀಧರ್, ಶೀತಲ್ ಶೆಟ್ಟಿ, ಡ್ಯಾನಿ ಕುಟ್ಟಪ್ಪ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಅವರಿಗೆ ಅವರ ಅಭಿಮಾನಿಗಳು ‘ಅಭಿನಯ ಅಪ್ಸರೆ’ ಎಂಬ ಬಿರುದು ನೀಡಿ ಗೌರವಿಸಿದರು.

ತಮ್ಮ ಸಿನಿಜೀವನದಲ್ಲಿ ಟೀಚರ್ ಪಾತ್ರ ಮಾಡಿದ್ದು ಇದೇ ಚಿತ್ರದಲ್ಲಿ ಮೊದಲು ಎಂದೇ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಉಪೇಂದ್ರ, ‘ಈ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ಒಂದಿಷ್ಟು ಹೋಮ್ರ್ಕ್ ಮಾಡಿ ಅಭಿನಯಿಸಿದೆ. ಒಬ್ಬ ಕಲಾವಿದನಿಗೆ ಈ ತರಹದ ಪಾತ್ರ ಮಾಡಿದಾಗ ಖುಷಿಯಾಗುತ್ತದೆ. ಈ ಚಿತ್ರವನ್ನು ಸರ್ಕಾರಿ ಶಾಲೆಯಲ್ಲೇ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ. ಮಕ್ಕಳ ಜತೆಗೆ ಕೆಲಸ ಮಾಡಿದ್ದು ಇನ್ನೊಂದು ಖುಷಿಯ ವಿಷಯ. ಈ ಚಿತ್ರದಲ್ಲಿ ‘ಸಿದ್ಲಿಂಗು’ ಶ್ರೀಧರ್ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಒಳ್ಳೆಯ ತಂಡ. ಇಂಥದ್ದೊಂದು ತಂಡದ ಜತೆಗೆ ಎಷ್ಟು ಚಿತ್ರಗಳನ್ನು ಬೇಕಾದರೂ ಮಾಡುವೆ’ ಎಂದರು.

ಕೊನೆಗೆ ಮಾತನಾಡಿದ ನಿರ್ದೇಶಕ ಗುರುದತ್, ‘ಖಾಸಗಿ ಶಾಲೆಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರ ಸಂಖ್ಯೆ ಶೇ. 2ರಷ್ಟು ಮಾತ್ರ. ಗುಣಮಟ್ಟದ ಶಿಕ್ಷಣ ಬರೀ ಖಾಸಗಿ ಶಾಲೆಗಳಲ್ಲಿ ಮಾತ್ರವಲ್ಲ, ಸರ್ಕಾರಿ ಶಾಲೆಗಳಲ್ಲೂ ಸಿಗುವಂತಾಗಲಿ’ ಎಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net