

ಬೆಂಗಳೂರು: ಕನ್ನಡ ಚಿತ್ರರಂಗವಷ್ಟೇ ಅಲ್ಲ, ಕಳೆದ ಒಂದೂವರೆ ವರ್ಷಗಳಿಂದ ಬೇರೆ ಭಾಷೆಯ ಚಿತ್ರರಂಗಗಳ ಯಾವ ಸ್ಟಾರ್ ನಟರು ಸಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಅದಕ್ಕೆ ಕಾರಣ, ಕರೊನಾ ಮತ್ತು ಲಾಕ್ಡೌನ್. ಲಾಕ್ಡೌನ್ ಇಲ್ಲದಿದ್ದರೂ ಕರೊನಾ ಹರಡಬಾರದು ಎಂಬ ಕಾರಣಕ್ಕೆ ತಮ್ಮ ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡಿದ್ದಾರೆ.
ನೀನಾಸಂ ಸತೀಶ್ ತಮ್ಮ ಹುಟ್ಟುಹಬ್ಬವನ್ನು ಜೂನ್ 20ರ ಭಾನುವಾರದಂದು ಆಚರಿಸಿಕೊಳ್ಳಬೇಕಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡಿದ್ದಾರೆ. ಕಳೆದ ವರ್ಷ ಸಹ ಲಾಕ್ಡೌನ್ ಕಾರಣದಿಂದ ಅವರು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಸಹ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಅದಕ್ಕೆ ಒಂದು ಕಾರಣ ಲಾಕ್ಡೌನ್ ಆದರೆ, ಇನ್ನೊಂದು ಕಾರಣ ಸಂಚಾರಿ ವಿಜಯ್ ನಿಧನ. ಸತೀಶ್ ಮತ್ತು ವಿಜಯ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇತ್ತೀಚೆಗೆ, ಲಾಕ್ಡೌನ್ ಸಮಯದಲ್ಲೂ ಇಬ್ಬರೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ವಿಜಯ್ ಸಾವಿನ ಶೋಕದಲ್ಲಿರುವ ಸತೀಶ್, ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, 'ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರಿವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು, ಸತೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಚಿತ್ರ 'ಪೆಟ್ರೋಮ್ಯಾಕ್ಸ್'ನ ಟೀಸರ್ ಬಿಡುಗಡೆಯಾಗುತ್ತದೆ ಎಂದು ಘೋಷಣೆಯಾಗಿತ್ತು. ಈಗ ಆ ಟೀಸರ್ ಬಿಡುಗಡೆ ಸಮ ಮುಂದಕ್ಕೆ ಹೋಗಿದೆ.