

ಶಿಮ್ಲಾ: ಅನಾರೋಗ್ಯದಿಂದ ಗುಣಮುಖರಾಗುತ್ತಿರುವ ತಮ್ಮ ತಾಯಿ ದುಲಾರಿ ದೇವಿ ಅವರನ್ನು ಕರೆದುಕೊಂಡು ಅನುಪಮ್ ಖೇರ್, ಇತ್ತೀಚೆಗೆ ಶಿಮ್ಲಾಗೆ ಹೋಗಿದ್ದಾರೆ. ತಾಯಿಗೆ ಹವಾ ಬದಲಾವಣೆ ಆದಂತಾಯಿತು, ಜತೆಗೆ ಆಕೆ ಹುಟ್ಟೂರು ನೋಡಿದಂತಾಯಿತು ಎಂದು ಅನುಪಮ್ ಖೇರ್, ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಶೇಷವೆಂದರೆ, ಈ ಪ್ರವಾಸದ ಸಂದರ್ಭದಲ್ಲಿ ಅನುಪಮ್ ಖೇರ್, ತಮ್ಮ ಹಳೆಯ ಸ್ನೇಹಿತರೊಬ್ಬರನ್ನು ಭೇಟಿ ಮಾಡಿದ್ದು. ಆತನನ್ನು ಅನುಪಮ್ ಖೇರ್ 50 ವರ್ಷಗಳ ಹಿಂದೆ ಭೇಟಿ ಮಾಡಿದ್ದರಂತೆ. ಆ ನಂತರ ಇಬ್ಬರೂ, ಒಬ್ಬರನ್ನೊಬ್ಬರು ನೋಡುವುದಕ್ಕೆ ಸಾಧ್ಯವಾಗಿರಲಿಲ್ಲ. ಅದು ಈಗ ಸಾಧ್ಯವಾಗಿದೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅನುಪಮ್ ಖೇರ್, 'ನಾನು ಮತ್ತು ಅನಿಲ್ ದತ್ತಾ, ಜತೆಯಾಗಿ ಓದಿದವರು. ನಾವು ಕಡೆಯದಾಗಿ ಭೇಟಿಯಾಗಿದ್ದು 1971ರಲ್ಲಿ. ಆ ಸಂದರ್ಭದಲ್ಲಿ ನಾವು ಪಿಯುಸಿ ಓದುತ್ತಿದ್ದೆವು. ಆ ನಂತರ ಭೇಟಿಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅಂಥದ್ದೊಂದು ಅವಕಾಶ ಸಿಕ್ಕಿದೆ. ಅಮ್ಮ ಸಹ ಆತನನ್ನು ನೋಡಿ ಖುಷಿಪಟ್ಟರು' ಎಂದು ಅನುಪಮ್ ಖೇರ್ ಬರೆದುಕೊಂಡಿದ್ದಾರೆ.
ಅನಿಲ್ ದತ್ತಾ ಅವರ ಮನೆಯಲ್ಲಿ ಸ್ವಲ್ಪ ಸಮಯ ಕಾಲ ಕಳೆದ ಅನುಪಮ್ ಖೇರ್, 'ನಾನ್ಯಾವತ್ತೂ ಕ್ಲಾಸ್ನಲ್ಲಿ ಕೊನೆಯವನಾದರೆ, ಅವನು ಯಾವತ್ತೂ ಮೊದಲನೆಯವನಾಗಿರುತ್ತಿದ್ದ' ಎಂದು ನೆನಪಿಸಿಕೊಂಡಿದ್ದಾರೆ.