

ಚೆನ್ನೈ: ಸಾರಥಿ ಸಿನಿಮಾದಲ್ಲಿ ದರ್ಶನ್ ಮತ್ತು ರಾಜ್ಕುಮಾರ್ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ತಂದೆಯ ಪಾತ್ರದಲ್ಲಿ ನಟಿಸಿ ಕನ್ನಡಿಗರಿಗೂ ಹತ್ತಿರವಾಗಿರುವ ನಟ ಶರತ್ ಕುಮಾರ್ 90ರ ದಶಕದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದರು. ಇಂದಿಗೂ ಸಾಕಷ್ಟು ಬಿಜಿಯಾಗಿರುವ ಶರತ್ ಕುಮಾರ್, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಆಲ್ ಇಂಡಿಯಾ ಸಮಥುವ ಮಕ್ಕಳ್ ಕಟ್ಚಿ ಪಕ್ಷದ ಸಂಸ್ಥಾಪಕರಾಗಿರುವ ಅವರು ರಾಜಕೀಯ ಕ್ಷೇತ್ರದಲ್ಲೂ ಬಿಜಿಯಾಗಿದ್ದಾರೆ.
ಶರತ್ ಕುಮಾರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನಯನತಾರಾ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಯನತಾರಾ ಮೊದಲ ತಮಿಳು ಸಿನಿಮಾ ಹೆಸರು ಅಯ್ಯ. ಈ ಚಿತ್ರದ ನಾಯಕ ಶರತ್ ಕುಮಾರ್. ಮೊದಲ ದಿನದ ಶೂಟಿಂಗ್ ಅನುಭವವನ್ನು ಮೆಲುಕು ಹಾಕಿದ್ದಾರೆ.
ಅಂದಿನ ನಯನತಾರಾ ಇಂದು ಲೇಡಿ ಸೂಪರ್ಸ್ಟಾರ್ ಆಗಿರುವುದು ನನಗೆ ತುಂಬಾ ಹೆಮ್ಮೆ ಇದೆ. ಮೊದಲ ದಿನದ ಶೂಟಿಂಗ್ ಅನುಭವ ಮರೆಯುವಂತಿಲ್ಲ. ಅಯ್ಯ ಸಿನಿಮಾದ ಶೂಟಿಂಗ್ ಹಳ್ಳಿಯೊಂದರಲ್ಲಿ ನಡೆಯುತ್ತಿತ್ತು. ಆ, ಚಿತ್ರದಲ್ಲಿ ನಯನಾ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಳು. ಮೊದಲ ದಿನ ಶೂಟಿಂಗ್ಗೆ ಮಾಡ್ರನ್ ಡ್ರೆಸ್ ಧರಿಸಿ ಬಂದಿದ್ದಳು.
ನಯನತಾರಾ ಅವತಾರ ನೋಡಿದ ನಿರ್ದೇಶಕ ಹರಿ, ತಕ್ಷಣ ಶಾಕ್ ಆಗಿ ಆಕೆಯನ್ನು ರೂಮಿಗೆ ಕರೆದೊಯ್ಯಲು ಆಮೇಲೆ ಮಾತನಾಡೋಣ ಎಂದು ಸೂಚಿಸಿದರು. ನಾನು ಈ ಸಿನಿಮಾದಲ್ಲಿ ಹೇಗಿರಬೇಕೆಂದು ಯೋಚಿಸಿದ್ದೇನೆ. ಆದರೆ, ಹೇಗೆ ಬಂದಿದ್ದಾರೆ ನೋಡಿ ಎಂದು ಗಾಬರಿಗೊಂಡರು. ಹೀರೋಯಿನ್ ಸರಿಯಾಗಿ ನೋಡಲು ಬಿಡಿ ಸರ್ ಎನ್ನುತ್ತಾ ತಮಾಷೆ ಮಾಡಿದೆ.
ಇದಾದ ಬಳಿಕ ನಯನತಾರರನ್ನು ಸಂಪೂರ್ಣ ಬದಲಾಯಿಸಿ, ಹಳ್ಳಿ ಹುಡುಗಿಯ ಲುಕ್ ಕೊಡಲಾಯಿತು. ರೂಮಿಗೆ ಹೋಗಿ ಆಕೆಯ ಲುಕ್ ನೋಡಿದಾಗ ಒಂದು ಕ್ಷಣ ನಾನೇ ಮರೆತು ಹೋದೆ. ಅಷ್ಟು ಚೆನ್ನಾಗಿ ಕಾಣಿಸುತ್ತಿದ್ದರು. ಅಂದು ಅಪರಿಚಿತೆಯಾಗಿದ್ದ ನಯನಾ, ಇಂದು ಲೇಡಿ ಸೂಪರ್ಸ್ಟಾರ್ ಆಗಿದ್ದಾರೆ. ಅವರ ಪ್ರಯಾಣ ನೋಡಿದರೆ ಸ್ಫೂರ್ತಿದಾಯಕವಾಗಿದೆ ಎಂದು ಶರತ್ಕುಮಾರ್ ಹೇಳಿದರು. (ಏಜೆನ್ಸೀಸ್)