

ಮುಂಬೈ: ಡ್ರಗ್ಸ್ ಜಾಲದ ಕುರಿತಾಗಿ ಸಾರಾ ಅಲಿ ಖಾನ್, ಎನ್ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿರುವ ವಿಷಯ ಗೊತ್ತೇ ಇದೆ. ಇದರಿಂದ ಸಾರಾ ಮನೆಯಲ್ಲಿ ದೊಡ್ಡ ಗಲಾಟೆಯೇ ಆಗಿದ್ದು, ಈ ಎಲ್ಲಾ ಸಮಸ್ಯೆಗಳಿಂದ ಹೊರತರುವುದಕ್ಕೆ ಅಜ್ಜಿ ಶರ್ಮಿಳಾ ಠ್ಯಾಗೋರ್ ಮೊರೆ ಹೋಗಿದ್ದಾರೆ ಸಾರಾ.
ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹ್ಯೆ ಪ್ರಕರಣ ತನಿಖೆ ನಡೆಸುವ ಸಂದರ್ಭದಲ್ಲಿ ಸಾರಾ ಅಲಿ ಖಾನ್ ಹೆಸರು ಬಂದಿತ್ತು. ಸುಶಾಂತ್ ಆಯೋಜಿಸುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಸಾರಾ ಸಹ ಭಾಗಿಯಾಗಿರುತ್ತಿದ್ದರು ಎಂದು ರಿಯಾ ಚಕ್ರವರ್ತಿ ಹೇಳಿದ್ದರು.
ಯಾವಾಗ ಈ ವಿಷಯ ಹೊರಬಿತ್ತೋ, ಸಾರಾ ತಂದೆ ಸೈಫ್ ಅಲಿ ಖಾನ್ ಕೆಂಡಾಮಂಡಲರಾಗಿದ್ದಷ್ಟೇ ಅಲ್ಲ, ಸಿಕ್ಕಾಪಟ್ಟೆ ಕೂಗಾಡಿದ್ದರಂತೆ. ಸಾರಾ ಈಗಷ್ಟೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ವೃತ್ತಿಜೀವನದ ಬಗ್ಗೆ ಗಮನಹರಿಸುವುದನ್ನು ಬಿಟ್ಟು, ಈ ರೀತಿ ಮಾಡಿಕೊಂಡಿದ್ದು ಎಷ್ಟು ಸರಿ ಎಂದು ರೇಗಾಡಿದ್ದರಂತೆ. ಅಷ್ಟೇ ಅಲ್ಲ, ಯಾವಾಗ ಎನ್ಸಿಬಿ ಕಡೆಯಿಂದ ಸಾರಾಗೆ ಸಮನ್ಸ್ ಬಂತೋ, ಇದೆಲ್ಲಾ ತಲೆ ನೋವೇ ಬೇಡ ಎಂದು ಅವರು ದೆಹಲಿಗೆ ಹೊರಟು ಹೋಗಿದ್ದಾರೆ.
ಹೇಗೂ ಕರೀನಾ, ಇದೀಗ ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಿರುವಾಗ ಆಕೆಯ ಮತ್ತು ಮಗ ತೈಮುರ್ ಜತೆಗೆ ಇರಬೇಕು ಎಂಬ ನೆಪ ಹೇಳಿ ಹೊರಟುಹೋದರಂತೆ.
ಬೇರೆ ದಾರಿ ತಿಳಿಯದೆ, ಸಾರಾ ತನ್ನಜ್ಜಿ ಶರ್ಮಿಳಾ ಠ್ಯಾಗೋರ್ ಅವರನ್ನು ಭೇಟಿ ಮಾಡಿ ಕಷ್ಟ ಹೇಳಿಕೊಂಡರಂತೆ. ಕುಟುಂಬದ ಕುಡಿ ಹೀಗೆ ಸಮಸ್ಯೆಯಲ್ಲಿ ಸಿಲುಕಿರುವಾಗ ದೂರ ಅಟ್ಟುವುದು ಸರಿಯಲ್ಲ ಎಂದು ಶರ್ಮಿಳಾ, ತಮ್ಮ ಮೊಮ್ಮಗಳ ಜತೆಗೆ ನಿಂತಿದ್ದಾರೆ. ಹೇಗಾದರೂ, ಇದೆಲ್ಲಾ ಸಮಸ್ಯೆಗಳಿಂದ ಆಕೆಯನ್ನು ಹೊರತರಬೇಕು ಎಂದು ಕಷ್ಟಪಡುತ್ತಿದ್ದಾರಂತೆ.