ನಾಲ್ಕು ವರ್ಷಗಳಿಂದ ನೋಡಿಲ್ಲ, ಮಾತಾಡಿಲ್ಲ ... ಸಂಜಯ್​ ಲೀಲಾ ಬನ್ಸಾಲಿ ಸ್ಪಷ್ಟನೆ

Sushant - Bhansali Final
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ವಿಚಾರವಾಗಿ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ, ಸೋಮವಾರ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಶಾಂತ್​ ಅವರನ್ನು ನೋಡಿಲ್ಲ, ಅವರೊಂದಿಗೆ ಮಾತನಾಡಿಲ್ಲ ಎಂದು ಬನ್ಸಾಲಿ ಹೇಳಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಡಿಪ್ರೆಶನ್​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯವಾಗಿ ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು ... ಹೀಗೆ 29 ಹೆಚ್ಚು ಜನರನ್ನು ಮುಂಬೈ ಪೊಲೀಸ್​ ವಿಚಾರಣೆಗೆ ಒಳಪಡಿಸಿದ್ದಾರೆ. 30ನೆಯವರಾಗಿ ಸಂಜಯ್​ ಲೀಲಾ ಬನ್ಸಾಲಿ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಗಾದ ಬನ್ಸಾಲಿ, ಈ ಸಂದರ್ಭದಲ್ಲಿ ಹಲವು ವಿಷಯಗಳು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ, ಸುಶಾಂತ್​ ಅವರನ್ನು ಬನ್ಸಾಲಿ ತಮ್ಮ ಯಾವುದೇ ಚಿತ್ರದಿಂದಲೂ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬನ್ಸಾಲಿ, 'ರಾಮ್​-ಲೀಲಾ' ಮತ್ತು 'ಬಾಜಿರಾವ್​ ಮಸ್ತಾನಿ' ಎರಡು ಚಿತ್ರಗಳಲ್ಲಿ ಸುಶಾಂತ್​ ಜತೆಗೆ ಕೆಲಸ ಮಾಡುವುದಕ್ಕೆ ಮುಂದಾಗಿದ್ದರಂತೆ. ಆದರೆ, ಸುಶಾಂತ್​ ಬೇರೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ, ನಟಿಸುವುದಕ್ಕೆ ಹಿಂದೇಟು ಹಾಕಿದರಂತೆ. 2016ರ ನಂತರ ಅವರನ್ನು ನೋಡಿಲ್ಲ ಮತ್ತು ಮಾತಾಡಿಲ್ಲ ಎಂದು ಬನ್ಸಾಲಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲ, ಬನ್ಸಾಲಿ ಯಾವತ್ತೂ ಸುಶಾಂತ್​ ಅವರ ಹತ್ತಿರದವರಾಗಿರಲಿಲ್ಲವಂತೆ. ಅವರಿಬ್ಬರ ಸಂಬಂಧ ಒಬ್ಬ ನಟ ಮತ್ತು ನಿರ್ದೇಶಕನದ್ದಾಗಿದ್ದು, ಅದರ ಹೊರತಾಗಿ ಯಾವುದೇ ಗೆಳೆತನ ಇರಲಿಲ್ಲವಂತೆ. ಹಾಗಾಗಿ, ಸುಶಾಂತ್​ಗೆ ಡಿಪ್ರೆಶನ್​ ಇದ್ದ ವಿಷಯ ತಮಗೆ ಗೊತ್ತಿಲ್ಲ ಎಂದು ಬನ್ಸಾಲಿ ಈ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆ ಸಂಬಂಧ ಬನ್ಸಾಲಿ ಅವರನ್ನು ಎರಡು ಪೊಲೀಸ್​ ಸ್ಟೇಶನ್​ಗಳಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ವಿಚಾರಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ, ಅವರಿಂದ ಉತ್ತರ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net