ಮುಂಬೈನ ಡಬ್ಬಾವಾಲಾಗಳ ನೆರವಿಗೆ ಬಂದ ಸಂಜಯ್​ ದತ್​ ಮತ್ತು ಸುನೀಲ್​ ಶೆಟ್ಟಿ

Sanjay Dutt and Sunil Shetty - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ದೊಡ್ಡ ಸಂಕಷ್ಟಕ್ಕೆ ಸಿಲುಕಿದವರು ಮುಂಬೈನಾ ಡಬ್ಬಾವಾಲಾಗಳು. ಲಕ್ಷಾಂತರ ಜನಕ್ಕೆ ಊಟ ಕೊಡುತ್ತಿದ್ದ ಈ ಡಬ್ಬಾವಾಲಾಗಳು, ಲಾಕ್​ಡೌನ್​ನಿಂದ ಆಫೀಸ್​ಗಳೆಲ್ಲಾ ಬಂದ್​ ಆಗಿದ್ದರಿಂದ, ಸಾಕಷ್ಟು ಪರದಾಡುವಂತಾಯಿತು. ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದವರಿಗೆ ಸಾಕಷ್ಟು ಸಮಸ್ಯೆಗಳು ಉಂಟಾದವು.

ಈಗ ಡಬ್ಬಾವಾಲಾಗಳ ನೆರವಿಗೆ ಬಾಲಿವುಡ್​ನ ನಟರಾದ ಸಂಜಯ್​ ದತ್​ ಮತ್ತು ಸುನೀಲ್​ ಶೆಟ್ಟಿ ಬಂದಿದ್ದಾರೆ. ಕಷ್ಟದಲ್ಲಿರುವ ಸಾವಿರಾರು ಡಬ್ಬಾವಾಲಾಗಳ ಜತೆಯಲ್ಲಿ ನಿಂತಿದ್ದು ಅವರಿಗೆ ಅಗತ್ಯದ ವಸ್ತುಗಳನ್ನು ಪೂರೈಸುವುದರಲ್ಲಿ ನಿರತರಾಗಿದ್ದಾರೆ.

ಈ ಕೆಲಸದಲ್ಲಿ ಸಂಜಯ್​ ಮತ್ತು ಸುನೀಲ್​ ಜತೆಗೆ ಸಚಿವ ಅಸ್ಲಮ್​ ಶೇಖ್​ ಸಹ ಸೇರಿಕೊಂಡಿದ್ದಾರೆ. ಹಾಗೆ ನೋಡಿದರೆ, ಅವರು ಸೇರಿಕೊಂಡಿಲ್ಲ, ತಾನು ಅವರ ಜತೆಗೆ ಸೇರಿಕೊಂಡಿರುವೆ ಎಂದು ಸುನೀಲ್​ ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಸಂಕಷ್ಟದಲ್ಲಿರುವ ಮುಂಬೈನ ಡಬ್ಬಾವಾಲಾಗಳಿಗೆ ಸಹಾಯ ಮಾಡುವುದಕ್ಕೆ ಸಂಜಯ್​ ಮತ್ತು ಅಸ್ಲಂ ಜತೆಯಾಗಿದ್ದಾರೆ. ನಾನು ಸಹ ಅವರ ಜತೆಗೆ ಕೈ ಜೋಡಿಸಿದ್ದೇನೆ. ಈಗಾಗಲೇ ಬಹಳಷ್ಟು ಡಬ್ಬಾವಾಲಾಗಳು ಪೂಣೆಯಲ್ಲಿ ಕ್ಯಾಂಪ್​ ಮಾಡಿದ್ದಾರೆ ಎಂಬ ಸುದ್ದಿಯಿದೆ. ಅವರಿಗೆ ನೆರವಾಗುವಂತೆ ಈಗಾಗಲೇ 800 ಕಿಟ್​ಗಳ ರೇಷನ್​ ಕಳುಹಿಸಲಾಗಿದೆ. ಈ ಕಿಟ್​ಗಳಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಗೋಧಿ ಹಿಟ್ಟು ಮತ್ತು ಎಣ್ಣೆ ಇದೆ' ಎಂದು ಹೇಳಿದ್ದಾರೆ.

ಈಗಾಗಲೇ 800 ಕಿಟ್​ಗಳನ್ನು ಖೇದ್​ ಮತ್ತು ಮಾಳ್ವಳ್​ ಎಂಬ ಹಳ್ಳಿಗಳಿಗೆ ಕಳಿಸಲಾಗಿದೆಯಂತೆ. ಅಲ್ಲಿ 'ಸೇವ್​ ದಿ ಚಿಲ್ಡ್ರನ್​' ಎಂಬ ಸರ್ಕಾರೇತರ ಸಂಸ್ಥೆಯು ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಅದರ ಮೂಲಕ ಸುಮಾರು 5000 ಸಾವಿರ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಅಗತ್ಯ ದವಸ-ಧಾನ್ಯಗಳನ್ನು ಹಂಚಲಾಗುತ್ತದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net