ಯಾರೋ ಬ್ರೋಕರ್​ಗೆ ಉತ್ತರಿಸುವ ಅವಶ್ಯಕತೆ ನನಗಿಲ್ಲ: ಸಂಜನಾ

Sanjana Galrani New - Final
Published on

ಡ್ರಗ್ಸ್​ ವಿಷಯದಲ್ಲಿ ನಟಿ ಸಂಜನಾ ಅವರ ಆಪ್ತ ರಾಹುಲ್​ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆಪ್ತನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ, ಸಂಜನಾ ಅವರು ಪರಾರಿಯಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಈ ವಿಷಯವಾಗಿ ಮಾತನಾಡಿರುವ ಸಂಜನಾ, ತಮಗೆ ಯಾವ ನೋಟೀಸ್​ ಸಹ ಬಂದಿಲ್ಲ ಮತ್ತು ಬಚ್ಚಿಟ್ಟುಕೊಳ್ಳುವುದಕ್ಕೆ ತಾನು ದಾವೂದ್​ ಇಬ್ರಾಹಿಮ್​ ಅಥವಾ ಒಸಾಮಾ ಬಿನ್​ ಲೇಡನ್​ ಅಲ್ಲ ಎಂದಿದ್ದರು.

ಈಗ ಈ ಕುರಿತು ವಾಟ್ಸಾಪ್​ ಮೂಲಕ ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿರುವ ಅವರು, 'ಡ್ರಗ್ಸ್​ ವಿಚಾರದಲ್ಲಿ ಹಲವರು ನನಗೆ ಕರೆ ಮಾಡುತ್ತಿದ್ದಾರೆ. ಯಾವ ಕರೆಗೂ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ, ಹಾಗಂತ ನಾನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀನಿ ಎಂದಲ್ಲ. ಅರೆಸ್ಟ್​ ಆಗಿರುವ ರಾಹುಲ್​​ ನನ್ನ ರಾಖಿ ಬ್ರದರ್, ಅವನು ತುಂಬಾ ಒಳ್ಳೆಯವನು. ಅವನು ನನಗೆ ಅಕ್ಕ ಎಂದು ಕರೆಯುತ್ತಾನೆ. ರಾಹುಲ್​ ರಿಯಲ್​ ಎಸ್ಟೇಟ್​​ ಉದ್ಯಮದಲ್ಲಿದ್ದಾನೆ, ಪಾರ್ಟಿಯನ್ನ ಇಷ್ಟಪಡುತ್ತಾನೆ. ನನಗೆ ತಿಳಿದಂತೆ ಅವನು ಡ್ರಗ್​ ಸ್ಕ್ಯಾಂಡಲ್​​ನಿಂದ ದೂರವಿದ್ದಾನೆ. ಸೋಷಿಯಲ್​ ಮೀಡಿಯಾದಲ್ಲಿ ಅವನು ಬಹಳ ಜನಪ್ರಿಯನಾಗಿರುವುದರಿಂದ ಅವನನ್ನು ಬಲಿಪಶು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಇನ್ನು ಪ್ರಶಾಂತ್​ ಸಂಬರಗಿ ಆರೋಪದ ಕುರಿತಾಗಿ ಮಾತನಾಡಿರುವ ಸಂಜನಾ, 'ಪ್ರಶಾಂತ್​ ಸಂಬರಗಿ ಯಾರೆಂಬುದೇ ನಮಗೆ ಗೊತ್ತಿಲ್ಲ, ಆತ ಒಬ್ಬ ಬ್ರೋಕರ್​ ಮತ್ತು ರಾಜಕಾರಣಿಗಳಿಗೆ ಕೆಲಸ ಮಾಡುತ್ತಾನೆ ಎಂಬ ಮಾಹಿತಿ ಸಿಕ್ಕಿತು. ನನ್ನ ಹೆಸರನ್ನ ಹೇಳುವ ಯೋಗ್ಯತೆ ಅವನಿಗಿಲ್ಲ, ಅವನೆಷ್ಟು ಚಿಕ್ಕವನು ಅಂತ ಇದರಲ್ಲೇ ಗೊತ್ತಾಗುತ್ತದೆ. ‘ಬೀದಿಯಲ್ಲಿ ನಾಯಿ ಬೊಗಳಿದರೆ, ತಿರುಗಿ ಬೊಗಳಬೇಡ ...’ ಎಂದು ನನ್ನ ತಂದೆತಾಯಿ ನಾನು ಚಿಕ್ಕವಳಿದ್ದಾಗಲೇ ಹೇಳಿಕೊಟ್ಟಿದ್ದರು. ಹಾಗಾಗಿ ಉದಾಸೀನ ಮಾಡುವುದನ್ನ ಕಲಿತುಕೊಂಡಿದ್ದೇನೆ' ಎಂದು ಸಂಜನಾ ಹೇಳಿದ್ದಾರೆ.

ಇನ್ನು ಡ್ರಗ್ಸ್​ ವಿಷಯವಾಗಿ ಮಾತನಾಡಿರುವ ಅವರು, 'ಪಾರ್ಟಿಗಳಲ್ಲಿ ಹಲವರು ಕುಡಿಯುವುದನ್ನು ನಾನು ನೋಡಿದ್ದೇನೆ. ಆದರೆ, ಡ್ರಗ್ಸ್​ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕನ್ನಡ ಚಿತ್ರರಂಗವನ್ನು ಅನಾವಶ್ಯಕವಾಗಿ ಇದರಲ್ಲಿ ಎಳೆದು ತರುತ್ತಿರುವುದು ನೋಡಿ ಕಷ್ಟವಾಗುತ್ತದೆ. ನನ್ನ ಮಟ್ಟಿಗೆ ಇದೊಂದು ದೇವಸ್ಥಾನವಿದ್ದಂತೆ. ಇವತ್ತು ನಾನೇನು ಆಗಿದ್ದೀನೋ, ಅದಕ್ಕೆ ಕಾರಣ ಕನ್ನಡ ಚಿತ್ರರಂಗ' ಎಂದಿದ್ದಾರೆ ಸಂಜನಾ.

ಈ ವಿಷಯದಲ್ಲಿ ಚಿರಂಜೀವಿ ಸರ್ಜಾ ಅವರ ಹೆಸರು ತಳುಕು ಹಾಕಿಕೊಂಡಿರುವುದರ ಬಗ್ಗೆ ಮಾತನಾಡಿರುವ ಅವರು, 'ಚಿರು ಸಾವಿನಿಂದ ಅವರ ಕುಟುಂಬ ಈಗಾಗಲೇ ಸಾಕಷ್ಟು ನೊಂದಿದೆ. ಹಾಗಿರುವಾಗ ಇಂತಹ ವಿಷಯಗಳಿಗೆ ಅವರ ಹೆಸರು ತಳುಕು ಹಾಕಿ ಇನ್ನಷ್ಟು ತೊಂದರೆ ಕೊಡುವುದು ಸರಿಯಲ್ಲ' ಎಂದು ಸಂಜನಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಡ್ರಗ್ಸ್​ ಕುರಿತಾಗಿ ತಮ್ಮ ನಿಲುವಿನ ಬಗ್ಗೆ ಮಾತನಾಡಿರುವ ಅವರು, 'ನನಗೆ ಈ ವಿಷಯದಲ್ಲಿ ಮಾತನಾಡುವುದಕ್ಕೆ ಇಷ್ಟವಿಲ್ಲ ಮತ್ತು ಈ ವಿಷಯವಾಗಿ ನಾನು ಪ್ರೂವ್​ ಮಾಡುವುದು ಏನೂ ಇಲ್ಲ. ನಾನು ಐಶ್ವರ್ಯ ರೈ ಅಲ್ಲದಿರಬಹುದು. ಆದರೆ, ನನಗೆ ನನ್ನದೇ ಆದ ಯಶಸ್ಸು ಮತ್ತು ಅಭಿಮಾನಿ ಬಳಗವಿದೆ. ಬಹಳ ಕಷ್ಟಪಟ್ಟು ನಾನು ಇಲ್ಲಿಯವರೆಗೂ ಬಂದಿದ್ದೇನೆ. ಇಂದಿರಾನಗರದಲ್ಲಿ ಮನೆ, ಮೂರು ಕಾರು ಹೇಗೆ ಸಾಧ್ಯವಾಯಿತು ಎಂದು ಕೇಳುವವರಿದ್ದಾರೆ. ಇದಕ್ಕೆ ನಾನು ಬಹಳ ಕಷ್ಟಪಟ್ಟಿದ್ದೇನೆ. ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ ಮತ್ತು ಹೇಗೆ ಸಂಪಾದಿಸಿದ್ದೇನೆ ಎಂಬುದನ್ನು ಸಾಕ್ಷಿ ಸಮೇತ ತೋರಿಸಬಲ್ಲೆ. ಅದರಲ್ಲೇನಾದರೂ ತಪ್ಪಾಗಿದ್ದರೆ, ಅದನ್ನು ಕೇಳುವುದಕ್ಕೆ ಇನ್​ಕಮ್​ ಟ್ಯಾಕ್ಸ್​ ಇಲಾಖೆ ಇದೆ. ಯಾರೋ ಬ್ರೋಕರ್​ಗೆ ಕೇಳುವ ಹಕ್ಕಿಲ್ಲ ' ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net