

ಲಾಕ್‌ಡೌನ್‌ನಿಂದ ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲಾ ತಡವಾಗುತ್ತಿವೆ. ಇನ್ನು ಲಾಕ್‌ಡೌನ್ ಮುಗಿದ ಮೇಲಾದರೂ ತಕ್ಷಣ ಚಿತ್ರಗಳು ಬಿಡುಗಡೆಯಾಗುತ್ತವಾ ಎಂಬುದು ಈಗಲೇ ಹೇಳುವುದು ಕಷ್ಟ. ಕಾರಣ ಭಯ. ಕರೊನಾ ಬಗ್ಗೆ ಜನರಲ್ಲಿ ಭಯವಿರುವ ಕಾರಣ, ಲಾಕ್‌ಡೌನ್ ಮುಗಿದು ಚಿತ್ರಮಂದಿರಗಳು ತೆಗೆದರೂ, ಜನ ಹೋಗಿ ಚಿತ್ರ ವೀಕ್ಷಿಸುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಬಹಳಷ್ಟು ನಿರ್ಮಾಪಕರು ತಮ್ಮ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಈ ಪೈಕಿ ‘ತ್ರಿಕೋನ’ ಚಿತ್ರ ಸಹ ಒಂದು.
ಈ ಹಿಂದೆ ‘ಬರ್ಫಿ’, ‘ಪೆರೋಲ್’ ಮತ್ತು ‘ಅಮೃತವಾಣಿ’ ಚಿತ್ರಗಳನ್ನು ನಿರ್ಮಿಸಿದ್ದ ರಾಜಶೇಖರ್, ಇದೀಗ ‘ತ್ರಿಕೋನ’ ನಿರ್ಮಿಸಿದ್ದಾರೆ. ‘143’ ಖ್ಯಾತಿಯ ಚಂದ್ರಕಾಂತ್ ಈ ಚಿತ್ರದ ನಿರ್ದೇಶಕರು. ಲಕ್ಷ್ಮೀ, ಸುರೇಶ್ ಹೆಬ್ಳೀಕರ್, ಅಚ್ಯುತ್ ಕುಮಾರ್, ಸುಧಾರಾಣಿ ಮುಂತಾದವರು ನಟಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಒಂದು ಪಕ್ಷ ತಡವಾದರೆ, ಓಟಿಟಿ ಮೂಲಕ ಬಿಡುಗೆಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ ರಾಜಶೇಖರ್.
‘ಈಗಾಗಲೇ ‘ದಿಯಾ’ ಮುಂತಾದ ಚಿತ್ರಗಳನ್ನು ಚಿತ್ರಮಂದಿರಗಳಿಂತ, ಓಟಿಟಿಯಲ್ಲೇ ಜನ ನೋಡಿದ್ದಾರೆ. ನಮ್ಮ ಚಿತ್ರದ ಮೊದಲ ಕಾಪಿ ಬಂದಿದೆ. ಬೇಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಶುರುವಾದರೆ, ಚಿತ್ರ ಬಿಡುಗಡೆಗೆ ಮಾಡುತ್ತೇವೆ. ಈ ಮಧ್ಯೆ ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ಅಲ್ಲೇ ಮೊದಲು ಅವಕಾಶ ಸಿಕ್ಕರೆ, ಅಲ್ಲೇ ಬಿಡುಗಡೆ ಮಾಡುವುದಕ್ಕೂ ಸಿದ್ಧ’ ಎನ್ನುತ್ತಾರೆ ರಾಜಶೇಖರ್.
‘ತ್ರಿಕೋನ’ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ತಯಾರಾಗಿದ್ದು, ಮೂರೂ ಚಿತ್ರಗಳ ನಿರೂಪಣೆ ಬೇರೆಯಾಗಿರುತ್ತದೆ ಎನ್ನುವುದೇ ಈ ಚಿತ್ರದ ವಿಶೇಷ.