

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಾಯಕತ್ವದ ‘ಪುಷ್ಪ’ ಚಿತ್ರ ಇತ್ತೀಚೆಗಷ್ಟೇ ಪೋಸ್ಟರ್ ರಿಲೀಸ್ ಮಾಡಿಕೊಂಡು ಅಭಿಮಾನಿಗಳಿಗೆ ಉಡುಗೊರೆ ನೀಡಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಪುಷ್ಪ ಚಿತ್ರದಿಂದ ವಿಜಯ್ ಸೇತುಪತಿ ಹಿಂದೆ ಸರಿದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಅದಕ್ಕೆ ಡೇಟ್ ಕ್ಲ್ಯಾಷ್ ಎಂಬ ಬಣ್ಣ ಹಚ್ಚಲಾಗಿತ್ತು. ಆದರೆ, ಅಸಲಿ ಕಥೆಯೇ ಬೇರೆಯೇ ಇದೆ.
ಹೌದು, ವಿಜಯ್ ಸೇತುಪತಿಗೆ ಈ ಸಿನಿಮಾ ಕೇವಲ ತೆಲುಗಿನಲ್ಲಷ್ಟೇ ತೆರೆಕಾಣಲಿದೆ ಎಂಬುದನ್ನು ನಿರ್ದೇಶಕರು ಹೇಳಿಕೊಂಡಿದ್ದರು. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದರು. ಯಾವಾಗ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹೊರಬಿತ್ತೋ, ಆಗ ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದರು ವಿಜಯ್. ‘ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಾನು ವಿಲನ್ ಆಗಿ ಕಾಣಿಸಿಕೊಳ್ಳಬಲ್ಲೆ. ಆದರೆ, ತಮಿಳಿನಲ್ಲಿ ಖಳನಾಗಲು ಸಿದ್ಧನಿಲ್ಲ. ಅಲ್ಲಿ ಬೇಕಾದರೆ ಬೇರೆ ನಟನನ್ನು ಬಳಸಿಕೊಳ್ಳಿ‘ ಎಂದಿದ್ದಾರಂತೆ.
ಸದ್ಯ ಚಿತ್ರತಂಡ ಮುಂದೇನು ಎಂಬ ಬಗ್ಗೆ ವಿಚಾರಿಸುತ್ತಿದ್ದು, ಎಲ್ಲ ಭಾಷೆಗಳಲ್ಲಿ ಒಬ್ಬನೇ ಖಳನಿರ್ತಾನಾ ಅಥವಾ ವಿಜಯ್ ಸೇತುಪತಿ ಅವರನ್ನೇ ಮತ್ತೊಮ್ಮೆ ಮನವೊಲಿಸುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್)