

ಅವರು ಸ್ಟಾರ್ನಟರಾಗಿ ಮಿಂಚಲಿಲ್ಲ. ಹತ್ತಾರು ಅಭಿಮಾನಿ ಸಂಘಗಳು ಅವರಿಗಿರಲಿಲ್ಲ. ಹೆಚ್ಚು ಪ್ರಶಸ್ತಿ- ಪಾರಿತೋಷಕಗಳು ಸಿಗಲಿಲ್ಲ. ಆದರೆ, ‘ಕಲಾ ತಪಸ್ವಿ’ ಎಂದರೆ ಸಾಕು, ಎಲ್ಲರೂ ಥಟ್ಟನೆ ನೆನಪಿಸಿಕೊಳ್ಳುತ್ತಿದ್ದುದು ರಾಜೇಶ್ ಅವರನ್ನು. ‘ಕಲಾ ತಪಸ್ವಿ’ ಎಂಬ ಬಿರುದು ರಾಜೇಶ್ ಅವರ ಜತೆಗೆ ಹಾಸುಹೊಕ್ಕಾಗಿತ್ತು. ಬಿರುದಿಗೆ ತಕ್ಕಂತೆ ರಾಜೇಶ್ ಕಲೆಯ ತಪಸ್ಸು ಮಾಡುತ್ತಿದ್ದರೇ ಹೊರತು, ಯಾವತ್ತೂ ಬೇರೆ ವಿಷಯಗಳ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿರಲಿಲ್ಲ.
ಕನ್ನಡ ಚಿತ್ರರಂಗದಲ್ಲಿ ರಾಜೇಶ್ ನಾಯಕನಿಗಿಂಥ ಪೋಷಕ ಪಾತ್ರಗಳಲ್ಲೇ ಹೆಚ್ಚು ಮಿಂಚಿದರು ಎಂದರೆ ತಪ್ಪಿಲ್ಲ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಪೋಷಕ ಪಾತ್ರದ ಮೂಲಕ. ಆಗ ಅವರಿನ್ನೂ ರಾಜೇಶ್ ಆಗಿರಲಿಲ್ಲ. ವಿದ್ಯಾಸಾಗರ್ ಆಗಿದ್ದರು. ಕೆಲಸ ಮಾಡುತ್ತಾ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಟಕವೊಂದರಲ್ಲಿ ಅವರ ಅಭಿನಯವನ್ನು ನೋಡಿ ಮೆಚ್ಚಿದ ಹುಣಸೂರು ಕೃಷ್ಣಮೂರ್ತಿಗಳು, ತಮ್ಮ ‘ವೀರ ಸಂಕಲ್ಪ’ ಚಿತ್ರದ ಮೂಲಕ ಪರಿಚಯಿಸಿದರು. ಆ ಚಿತ್ರ ಮುಗಿಯುತ್ತಿದ್ದಂತೆಯೇ ‘ಶ್ರೀರಾಮಾಂಜನೇಯ ಯುದ್ಧ’ ಚಿತ್ರದಲ್ಲಿ ಭರತನ ಪಾತ್ರ ಸಿಕ್ಕಿತು. ಬಿ.ಆರ್. ಪಂತುಲು ನಿರ್ದೇಶನದ ‘ಗಂಗೆ ಗೌರಿ’ಯಲ್ಲಿ ಇನ್ನೊಂದು ಪಾತ್ರ ಸಿಕ್ಕಿತು.
ಹೀಗೆ ಮೊದಲ ಮೂರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ‘ನಮ್ಮ ಊರು’ ಮೂಲಕ ಹೀರೋ ಆದರು. ಒಂದಿಷ್ಟು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ ನಂತರ, ಬಹುತಾರಾಗಣದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಡಾ. ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್, ವಿಷ್ಣುವರ್ಧನ್, ಗಂಗಾಧರ್, ಶ್ರೀನಾಥ್ ಮುಂತಾದವರ ಜತೆಗೆ ತೆರೆ ಹಂಚಿಕೊಂಡರು. ಕ್ರಮೇಣ ಪೋಷಕ ಪಾತ್ರಗಳತ್ತ ಶಿಫ್ಟ್ ಆದರು.
ರಾಜೇಶ್ ಅವರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದುದು ಮೌಲ್ಯಯುತ ಪಾತ್ರಗಳನ್ನು. ವೈಯಕ್ತಿಕ ಜೀವನದಲ್ಲಿ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿ ಕೊಂಡ ರಾಜೇಶ್, ತೆರೆಯ ಮೇಲೂ ಹೆಚ್ಚಾಗಿ ಜವಾಬ್ದಾರಿಯುತ ಪಾತ್ರಗಳಲ್ಲೇ ಕಾಣಿಸಿಕೊಂಡರು. ಅದಕ್ಕೆ ಒಂದು ಅಪವಾದ ಎಂದರೆ, ಅದು ಶಂಕರ್ ನಾಗ್ ಅಭಿನಯದ ‘ಜಯಭೇರಿ’. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಜವಾಬ್ದಾರಿಯುತ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಶಿಸ್ತು ಮತ್ತು ಮೌಲ್ಯಗಳನ್ನು ಬಹಳವಾಗಿ ನಂಬಿದ್ದ ಅವರು, ಇತ್ತೀಚಿನ ಕೆಲವು ಪತ್ರಿಕಾಗೋಷ್ಠಿಗಳಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಬೇಸರದಿಂದ ಮಾತನಾಡಿದ್ದರು. ರಾಜೇಶ್ ಅವರ ಕಲಾಸೇವೆ ಗುರುತಿಸಿ ಖಾಸಗಿ ಸಂಸ್ಥೆ ‘ಕಲಾ ತಪಸ್ವಿ’ ಎಂಬ ಪ್ರಶಸ್ತಿ ಕೊಟ್ಟಿದ್ದು ಬಿಟ್ಟರೆ, ಮಿಕ್ಕಂತೆ ಅವರಿಗೆ ಸಿಕ್ಕ ಪ್ರಶಸ್ತಿಗಳು ಕಡಿಮೆಯೇ. 2012ರಲ್ಲಿ ಧಾರವಾಡದ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕಲ್ಪನಾ ಜತೆ ಹೆಚ್ಚು ನಟನೆ: ಕನ್ನಡ ಚಿತ್ರರಂಗದಲ್ಲಿ ಹಲವು ನಟ-ನಟಿಯರ ಜೋಡಿ ಜನಪ್ರಿಯವಾಗಿದೆ. ಈ ಪೈಕಿ ರಾಜೇಶ್ ಮತ್ತು ಕಲ್ಪನಾ ಅವರ ಜೋಡಿ ಸಹ ಒಂದು. ‘ಕಪು್ಪ-ಬಿಳುಪು’ ಚಿತ್ರದಲ್ಲಿ ಮೊದಲ ಬಾರಿ ಜತೆಯಾಗಿ ನಟಿಸಿದ ಅವರಿಬ್ಬರು ನಂತರದ ದಿನಗಳಲ್ಲಿ ‘ಕಾಣಿಕೆ’, ‘ಬೃಂದಾವನ’, ‘ಅರಿಶಿಣ ಕುಂಕುಮ’, ‘ನಮ್ಮ ಮನೆ’, ‘ದೇವರ ಮಕ್ಕಳು’, ‘ಸುಭದ್ರಾ ಕಲ್ಯಾಣ’, ‘ಭಲೇ ಅದೃಷ್ಟವೋ ಅದೃಷ್ಟ’, ‘ಮರೆಯದ ದೀಪಾವಳಿ’, ‘ಬೆಳುವಲದ ಮಡಿಲಲ್ಲಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಂತಿ ಅವರ ಜತೆಗೂ ‘ದೇವರ ದುಡ್ಡು’, ‘ಬ್ರೋಕರ್ ಭೀಷ್ಮಾಚಾರಿ’ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನರಾದ ವಿಷಯ ತುಂಬ ನೋವುಂಟು ಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. | ಬಸವರಾಜ ಬೊಮ್ಮಾಯಿ ಸಿಎಂ ನಾನು, ರಾಜೇಶ್, ದ್ವಾರಕೀಶ್, ವಾಣಿಶ್ರೀ ಎಲ್ಲರೂ ಹುಣಸೂರು ಕೃಷ್ಣಮೂರ್ತಿಗಳ ಗರಡಿಯಿಂದ ಬಂದ ವರು. ನಮ್ಮೆಲ್ಲರಿಗಿಂತ ರಾಜೇಶ್ ತುಂಬ ಶಿಸ್ತಿನ ಮನುಷ್ಯ. ಮಾತನಾಡುವ ಕನ್ನಡ ಅಷ್ಟೇ ಸ್ಪಷ್ಟ. ಏನೇ ಮಾತನಾಡಿದರೂ ಆತನ ಬಾಯಿಂದ ಅಷ್ಟೇ ತೂಕದ ಮಾತುಗಳೇ ಬರುತ್ತಿದ್ದವು. ಆದರೆ, ಕಳೆದ ಕೆಲ ದಿನಗಳಿಂದ ಯಮನ ಜತೆ ಹೊಡೆದಾಡುತ್ತಿದ್ದ. ಯುದ್ಧ ಗೆದ್ದು ಬರುತ್ತಾನೆ ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. | ಭಾರ್ಗವ ಹಿರಿಯ ನಿರ್ದೇಶಕ
ಬೆಂಗಳೂರು: ಹಿರಿಯ ನಟ ರಾಜೇಶ್ (89) ವಯಸ್ಸಹಜ ಅನಾರೋಗ್ಯದಿಂದ ಶನಿವಾರ ಬೆಳಗಿನಜಾವ ನಿಧನರಾದರು. ಕಳೆದ 10 ದಿನಗಳಿಂದ ಕಿಡ್ನಿ ವೈಫಲ್ಯ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನವೆಂಬರ್ನಲ್ಲಿ ರಾಜೇಶ್ ಪತ್ನಿ ಪಾರ್ವತಮ್ಮ, ವಿದ್ಯಾರಣ್ಯಪುರದ ಮನೆಯಲ್ಲಿ ಅಸುನೀಗಿದ್ದರು.
ಶನಿವಾರ ಬೆಳಗ್ಗೆ ವಿದ್ಯಾರಣ್ಯಪುರದ ಮನೆಯಲ್ಲಿ ಪೂಜೆ ಮುಗಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಪಾರ್ಥೀವ ಶರೀರಕ್ಕೆ ನಾಡಧ್ವಜ ಹೊದಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರು, ರಾಜಕೀಯ ಗಣ್ಯರು ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಿದರು. ರಾಜೇಶ್ ಅವರ ಅಭಿಮಾನಿ ಸಿದ್ದಲಿಂಗರಾಜು, ತುಮಕೂರು ರಸ್ತೆ ಬಳಿ ಇರುವ ಗೋವಿಂದಪುರದಲ್ಲಿನ ತಮ್ಮ ಜಮೀನಿನಲ್ಲಿ 10 ಗುಂಟೆ ಜಾಗವನ್ನು ಸಮಾಧಿಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ, ಸಂಜೆ ವೇಳೆಗೆ ಕುಟುಂಬದವರ ಸಮ್ಮುಖದಲ್ಲಿ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಓಲ್ಡ್ ಮಾಂಕ್ ಕೊನೆಯ ಸಿನಿಮಾ: ರಾಜೇಶ್ ಐದು ದಶಕಗಳ ಸಿನಿ ಜೀವನದಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುಣ್ಯಪುರುಷ’, ‘ಸುಖಸಂಸಾರ’, ‘ನಮ್ಮ ಬದುಕು’, ‘ಭಲೇ ಭಾಸ್ಕರ’, ‘ಹೆಣ್ಣು ಹೊನ್ನು ಮಣ್ಣು’, ‘ಕ್ರಾಂತಿವೀರ’, ‘ಬಿಡುಗಡೆ’, ‘ಬದುಕು ಬಂಗಾರವಾಯಿತು’, ‘ಚದುರಿದ ಚಿತ್ರಗಳು’, ‘ವಸಂತ ನಿಲಯ’, ‘ಕಲಿಯುಗ’, ‘ತವರು ಮನೆ ಉಡುಗೊರೆ’, ‘ವಸುಂಧರಾ’ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರ ಅವರ ನಟನೆಯ ಕೊನೆಯ ಚಿತ್ರವಾಗಿದ್ದು, ಮುಂದಿನ ವಾರ ಬಿಡುಗಡೆಯಾಗಲಿದೆ.