ಸ್ಯಾಂಡಲ್​ವುಡ್​ ನಟರೆಲ್ಲಾ ಶಿವಣ್ಣ ಮನೆಯಲ್ಲಿ ಸೇರಿದ್ದ್ಯಾಕೆ?

Shivarajakumar - Artistes
Published on

ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳುವುದಕ್ಕೆ ಶಿವರಾಜಕುಮಾರ್​ ಅವರು ಒಪ್ಪಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಚಿತ್ರರಂಗದ ಗಣ್ಯರ ಜತೆಗೆ ಸಭೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಿವರಾಜಕುಮಾರ್ ಕಳೆದ ವಾರವೇ ಹೇಳಿಕೊಂಡಿದ್ದರು.

ಅದರಂತೆ, ಇಂದು ಶಿವರಾಜಕುಮಾರ್​ ಅವರ ಮನೆಯಲ್ಲಿ ಕನ್ನಡ ಚಿತ್ರರಂಗದ ಟಾಪ್​ ನಟರೆಲ್ಲಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಕಿರುತೆರೆ ಮತ್ತು ಚಿತ್ರರಂಗವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್, ಚಿತ್ರಮಂದಿರ ಪ್ರಾರಂಭ, ದರ ನಿಗದಿ, ತೆರಿಗೆ ವಿನಾಯಿತಿ ಮತ್ತು ಚಿತ್ರರಂಗದ ಪುನಶ್ಚೇತನದ ಕುರಿತಾಗಿ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಚಿವ ಸಿ.ಟಿ. ರವಿ ಸಹ ಹಾಜರಿದ್ದರು.

ಈ ಸಭೆಯಲ್ಲಿ ಶಿವರಾಜಕುಮಾರ್​, ರವಿಚಂದ್ರನ್​, ಉಪೇಂದ್ರ, ರಮೇಶ್​ ಅರವಿಂದ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಯಶ್​, ಗಣೇಶ್​, 'ದುನಿಯಾ' ವಿಜಯ್​, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್​, ಜಯಣ್ಣ, ಪುಷ್ಕರ್​ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸಿ.ಟಿ. ರವಿ, 'ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆಯಲು ಹಾಗು ದರ ನಿಗದಿ, ತೆರಿಗೆ ವಿನಾಯತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದೇನೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net