ಪಿರಂಗಿಪುರ ನಿಲ್ಲುವುದಿಲ್ಲ; ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ ಲುಕ್ ಬಿಡುಗಡೆ

Lanke
Published on

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕ್ರತ ನಟ ಸಂಚಾರಿ ವಿಜಯ್ ಬದುಕಿದ್ದಿದ್ದರೆ, ಇಂದು (ಶನಿವಾರ) 39ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ, ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ. ಅವರ ಅನುಪಸ್ಥಿತಿಯ ನಡುವೆಯೇ ಅವರು ನಟಿಸಿರುವ ಹಲವು ಸಿನಿಮಾ ತಂಡಗಳಿಂದ ಪೋಸ್ಟರ್, ಟೀಸರ್ ಬಿಡುಗಡೆ ಆಗುತ್ತಿವೆ. ಆ ಪೈಕಿ ‘ಪಿರಂಗಿಪುರ’ ಚಿತ್ರತಂಡ ಒಂದಷ್ಟು ವಿಶೇಷತೆಗಳೊಂದಿಗೆ ಅಗಲಿದ ನಟನಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ. ಜನಾರ್ದನ್ ನಿರ್ದೇಶನದಲ್ಲಿ ‘ಪಿರಂಗಿಪುರ’ ಸಿನಿಮಾ ತಯಾರಾಗುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಶೇ. 30 ಭಾಗದಷ್ಟು ಶೂಟಿಂಗ್ ಮಾತ್ರ ಮುಗಿದಿದೆ. ಹಾಗಾದರೆ, ಸಂಚಾರಿ ವಿಜಯ್ ಇಲ್ಲದೆ ಈ ಸಿನಿಮಾ ಪೂರ್ತಿ ಆಗುವುದು ಹೇಗೆ? ಕೌತುಕದ ಈ ಪ್ರಶ್ನೆಗೆ ನಿರ್ದೇಶಕರೇ ಉತ್ತರ ನೀಡಿದ್ದಾರೆ.

‘ನಮ್ಮ ಬಳಿ ಮೂರು ಆಯ್ಕೆಗಳಿವೆ. ಮೊದಲನೆಯದು, ಈಗಾಗಲೇ ನಾವೇ ಸಿದ್ಧಪಡಿಸಿರುವ ತ್ರಿಡಿ ಫೇಸ್ ಬಳಿಸಿ, ಸಂಚಾರಿ ವಿಜಯ್ ಅವರ ಪಾತ್ರಕ್ಕೆ ಬೇರೆ ಕಲಾವಿದನನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿಕೊಳ್ಳುವುದು. ಎರಡನೆಯದು, ಬೇರೆ ಯಾರಾದರೂ ಸ್ಟಾರ್ ಕಲಾವಿದರು ಸಿಕ್ಕರೆ, ಅವರೊಂದಿಗೆ ಹೊಸದಾಗಿಯೇ ಸಿನಿಮಾ ಶುರುಮಾಡುವುದು. ಮೂರನೆಯದು, ಯಾರೂ ಸಿಗಲಿಲ್ಲ ಎಂದಾದರೆ, ಇಡೀ ಸಿನಿಮಾವನ್ನು ವಿಎಫ್​ಎಕ್ಸ್ ಬಳಸಿ ಚಿತ್ರೀಕರಿಸುವ ಯೋಜನೆ ಹಾಕಿದ್ದೇವೆ’ ಎನ್ನುವ ಜನಾರ್ದನ್, ವಿಜಯ್ ಜನ್ಮದಿನಕ್ಕೆ ‘ಪಿರಂಗಿಪುರ’ದ ಎರಡನೇ ಲುಕ್ ಬಿಡುಗಡೆ ಮಾಡುತ್ತಿದ್ದಾರೆ. ‘ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ವಿಜಯ್ ಅವರಿಗೆ ಮೂರು ಶೇಡ್​ಗಳಿವೆ. ಈಗಾಗಲೇ ಮುದುಕನ ಗೆಟಪ್ ರಿವೀಲ್ ಮಾಡಿ ದ್ದೇವೆ. ಶನಿವಾರ ಮತ್ತೊಂದು ಲುಕ್ ಜತೆಗೆ ವಿಡಿಯೋವೊಂದು ಹೊರ ಬರಲಿದೆ. ‘ಸೈಲೆಂಟ್ ಸ್ಟಾರ್’ ಎಂಬ ಬಿರುದನ್ನೂ ನೀಡಲು ತಂಡ ನಿರ್ಧರಿಸಿದೆ’ ಎನ್ನುತ್ತಾರವರು. ತ್ರಿಪುರ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

‘ಲಂಕೆ’ಯಿಂದಲೂ ಪೋಸ್ಟರ್: ರಾಮ್ ಪ್ರಸಾದ್ ಎಂ.ಡಿ ನಿರ್ದೇಶನದ ‘ಲಂಕೆ’ ಸಿನಿಮಾದಲ್ಲಿ ‘ಲೂಸ್ ಮಾದ’ ಯೋಗಿ ಜತೆ ಸಂಚಾರಿ ವಿಜಯ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ವಿಜಯ್ ಜನ್ಮದಿನದ ಪ್ರಯುಕ್ತ ಪೋಸ್ಟರ್​ವೊಂದನ್ನು ತಂಡ ಬಿಡುಗಡೆ ಮಾಡಿದೆ. ಈ ನಡುವೆ ‘ಮೇಲೊಬ್ಬ ಮಾಯಾವಿ’, ‘ತಲೆದಂಡ’ ಸೇರಿ ಹಲವು ಸಿನಿಮಾ ಟೀಮ್ಳಿಂದಲೂ ಪೋಸ್ಟರ್ ಇತ್ಯಾದಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಸಂಚಾರಿ ವಿಜಯ್ ಕುರಿತು ಪತ್ರಕರ್ತ ಶರಣು ಹುಲ್ಲೂರು ಬರೆದಿರುವ ‘ಅನಂತವಾಗಿರು’ ಪುಸ್ತಕ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net