

ಬೆಂಗಳೂರು: ಸಂಚಾರಿ ವಿಜಯ್ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಬ್ಯುಸಿಯಾಗಿಲ್ಲದಿರಬಹುದು. ಆದರೆ, 'ನಾನು ಅವನಲ್ಲ ಅವಳು' ಚಿತ್ರದ ನಂತರ ಅವರು ಒಂದು ಹಂತದಲ್ಲಿ ಅದೆಷ್ಟು ಬ್ಯುಸಿಯಾಗಿದ್ದರೆಂದರೆ, ಎರಡು ವರ್ಷಗಳ ಕಾಲ ಅವರ ಐದೈದು ಚಿತ್ರಗಳು ಬಿಡುಗಡೆಯಾಗಿದ್ದವು.
'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬರುವವರೆಗೂ ಸಂಚಾರಿ ವಿಜಯ್ ಯಾರೆಂಬುದೇ ಗೊತ್ತಿರಲಿಲ್ಲ. ಆ ನಂತರ, ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಾದರು. 'ನಾನು ಅವನಲ್ಲ ಅವಳು' ನಂತರ 'ಕಿಲ್ಲಿಂಗ್ ವೀರಪ್ಪನ್', 'ಸಿನಿಮಾ ಮೈ ಡಾರ್ಲಿಂಗ್', 'ಸಿಪಾಯಿ', 'ಅಲ್ಲಮ' ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ವಿಜಯ್, 'ನನ್ ಮಗಳೇ ಹೀರೋಯಿನ್' ಮೂಲಕ ನಾಯಕರಾದರು.
'ನನ್ ಮಗಳೇ ಹೀರೋಯಿನ್' ಚಿತ್ರದ ನಂತರದ ದಿನಗಳಲ್ಲಿ 'ವರ್ತಮಾನ', 'ಕೃಷ್ಣ ತುಳಸಿ', '6ನೇ ಮೈಲಿ', 'ಪಾದರಸ', 'ನಾತಿಚರಾಮಿ', 'ಆಡುವ ಗೊಂಬೆ' ಮುಂತಾದ ಚಿತ್ರಗಳಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ವಿಜಯ್ ನಾಯಕರಾಗಿ ಅಭಿನಯಿಸಿದ ಚಿತ್ರಗಳು ಪ್ರೇಕ್ಷಕರ ಗಮನಸೆಳೆದರೂ, ದೊಡ್ಡ ಮಟ್ಟಿಗೆ ಯಶಸ್ವಿಯಾಗದ ಕಾರಣ, ಅವರು ಮತ್ತೆ ಪೋಷಕ ಪಾತ್ರಗಳತ್ತ ಶಿಫ್ಟ್ ಆದರು.
ನಾಯಕನಿಂದ ಪೋಷಕ ಪಾತ್ರಗಳತ್ತ ಜಿಗಿದ ಅವರು, 'ಜೆಂಟಲ್ಮ್ಯಾನ್' ಮತ್ತು 'ಆಕ್ಟ್ 1978' ಚಿತ್ರಗಳಲ್ಲೇ ಮಿಂಚಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ಕಳೆದ ವರ್ಷದ ಕೊನೆಯಲ್ಲಿ 'ಅವಸ್ಥಾಂತರ' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಮುಹೂರ್ತ ಸಹ ಆಗಿತ್ತು.