

ಬೆಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಮಂಗಳವಾರ ಮುಂಜಾನೆ 3.34ಕ್ಕೆ ನಿಧನರಾಗಿದ್ದು, ಸಾವಿನಲ್ಲೂ 7 ಜನರಿಗೆ ಜೀವದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮಿದುಳು ಡೆಡ್ ಆಗಿದ್ದರಿಂದ ವಿಜಯ್ರ 7 ಅಂಗಾಂಗವನ್ನು ಕುಟುಂಬಸ್ಥರ ದಾನ ಮಾಡಿದ್ದಾರೆ. ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕವಾಟಗಳನ್ನು ದಾನ ಮಾಡಲಾಗಿದ್ದು, 7 ಜನರ ಜೀವ ಉಳಿಸುವ ಕೆಲಸ ಸಾಗಿದೆ. ಹೀಗಾಗಲೇ ಸಂಬಂಧಪಟ್ಟ ಆಸ್ಪತ್ರೆಗಳು ಅಂಗಾಂಗ ತೆಗೆದುಕೊಂಡು ಹೋಗಿದ್ದು, ಅಲ್ಲಿ ಕಸಿ ನಡೆಯುತ್ತಿದೆ ಎಂದು ಜೀವ ಸಾರ್ಥಕತೆ ತಂಡ ತಿಳಿಸಿದೆ.
ಜೂ.12ರ ರಾತ್ರಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾಗೆ ತಲುಪಿದ್ದ ವಿಜಯ್ ಅವರ ಬ್ರೈನ್ ಡೆತ್ಗೆ ಆಗಿದೆ ಎಂದು ಸೋಮವಾರ ರಾತ್ರಿ ಆಸ್ಪತ್ರೆ ಅಧಿಕೃತವಾಗಿ ಘೋಷಣೆ ಮಾಡಿತ್ತು. ಅಂಗಾಗ ದಾನ ಪ್ರಕ್ರಿಯೆ ಮುಗಿದ ಬಳಿಕ ಡೆತ್ ಡಿಕ್ಲೆರೇಷನ್ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮರೆದ ವಿಜಯ್, ಹಲವರಿಗೆ ಜೀವದಾನ ನೀಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇಂದು ಬೆಳಗ್ಗೆ 8 ರಿಂದ 10ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ರ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದೆ. ವಿಜಯ್ರ ಹುಟ್ಟೂರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.