

ಬೆಂಗಳೂರು: ಸಂಚಾರಿ ವಿಜಯ್ ಕುರಿತು ಕೆಲವು ದಿನಗಳಿಂದ ಕೆಲವು ಸುದ್ದಿಗಳು ಕೇಳಿಬರುತ್ತಿವೆ. ಪ್ರಮುಖವಾಗಿ, ವಿಜಯ್ಗೆ ಜಾತಿ ಸಮಸ್ಯೆಯಾಗಿತ್ತು, ಅವಕಾಶಗಳು ಕಡಿಮೆಯಾಗಿದ್ದವು, ಅವರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು ಎಂಬ ಮಾತುಗಳು ಕೇಳಿ ಬಂದವು. ಅದಕ್ಕೆ ಪ್ರತಿಯಾಗಿ, ಸಂಚಾರಿ ವಿಜಯ್ಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಗೆಳೆಯ ವೀರು ಮಲ್ಲಣ್ಣ ಮತ್ತು ನಿರ್ದೇಶಕ ಬಿ.ಎಸ್. ಲಿಂಗದೇವರು ಹೇಳಿದ್ದರು.
ಇದನ್ನೂ ಓದಿ: 24 ವರ್ಷಗಳ ಹಿಂದಿನ ಫೋಟೋ ಈಗ ವೈರಲ್ ಆಗ್ತಿದೆ …
ಈಗ ಸಂಚಾರಿ ವಿಜಯ್ ಅವರ ಹಿರಿಯ ಸಹೋದರ ವಿರೂಪಾಕ್ಷ ಬಸವರಾಜಯ್, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸಹೋದರಿನಿಗೆ ಜಾತಿ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ, ಅವೆಲ್ಲವೂ ಊಹಾಪೋಹಗಳು ಎಂದು ಅವರು ಹೇಳಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.
'ನನ್ನ ತಮ್ಮ ತನಗೆ ಜಾತಿ ಸಮಸ್ಯೆಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಚಿತ್ರರಂಗದಿಂದಲೂ ಅವನಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರೂ ಸಮನಾಗಿ ಕಂಡಿದ್ದಾರೆ. ಎಲ್ಲರೂ ಅವನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಹಾಗಿರುವಾಗ ಅನ್ಯಾಯ ಅನ್ನೋದು ತಪ್ಪಾಗುತ್ತದೆ. ದಯವಿಟ್ಟು ಜಾತಿ ವಿಷಯವಾಗಿ ಯಾವುದೇ ಮೆಸೇಜ್ ಅಥವಾ ವಿಡಿಯೋ ಬಂದರೂ ಅದಕ್ಕೆ ಕಿವಿಗೊಡಬೇಡಿ ಮತ್ತು ಫಾರ್ವರ್ಡ್ ಮಾಡಬೇಡಿ' ಎಂದು ಅವರು ಹೇಳಿದ್ದಾರೆ.
ಸಂಚಾರಿ ವಿಜಯ್ಗೆ ಹಣಕಾಸಿನ ಸಮಸ್ಯೆ ಇತ್ತು ಎಂಬ ವಿಷಯವನ್ನು ಅಲ್ಲಗೆಳೆದಿರುವ ಅವರು, 'ವಿಜಯ್ಗೆ ಹಣಕಾಸಿನ ಸಮಸ್ಯೆ ಇರಲಿಲ್ಲ. ವಾರದಲ್ಲಿ ಮೂರ್ನಾಲ್ಕು ಜನ ನಿರ್ದೇಶಕರು ಬಂದು ಚಿತ್ರಗಳ ಆಫರ್ ಕೊಡುತ್ತಿದ್ದರು ಎಂದು ಅವನೇ ನನಗೆ ಹೇಳುತ್ತಿದ್ದ. ಅವಕಾಶಗಳೇನೋ ಸಿಗುತ್ತಿದ್ದವು. ಅದರಲ್ಲಿ ಒಳ್ಳೆಯ ಪಾತ್ರ ಬೇಕು ಎನ್ನುವುದು ಅವನ ಆಸೆಯಾಗಿತ್ತು ಅಷ್ಟೇ. ಅವನು ಚೆನ್ನಾಗಿ ದುಡಿಮೆ ಮಾಡುತ್ತಿದ್ದ ಮತ್ತು ಆ ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದ. ತೀರಾ ಆ ಮಟ್ಟಕ್ಕೆ ಅವನು ಯಾವ ಸಮಸ್ಯೆಯನ್ನೂ ಎದುರಿಸಲಿಲ್ಲ' ಎಂದು ವಿರೂಪಾಕ್ಷ ಹೇಳಿಕೊಂಡಿದ್ದಾರೆ.