ಚಿತ್ರರಂಗಕ್ಕೆ ಗುಡ್​ಬೈ ಹೇಳುವುದಕ್ಕೆ ಸನಾ ಖಾನ್​ ತೀರ್ಮಾನ ... ಕಾರಣ ಏನು?

Sana Khan - Final
Published on

ಮುಂಬೈ: 10 ವರ್ಷಗಳ ಹಿಂದೆ ಬಿಡುಗಡೆಯಾದ ಗಣೇಶ್​ ಅಭಿನಯದ 'ಕೂಲ್​ - ಸಖತ್​ ಹಾಟ್​ ಮಗ' ಎಂಬ ಚಿತ್ರ ನೆನಪಿರಬಹುದು. ಈ ಚಿತ್ರದಲ್ಲಿ ಗಣೇಶ್​ ಎದುರು ನಾಯಕಿಯಾಗಿ ಸನಾ ಖಾನ್​ ಎಂಬ ಬಾಲಿವುಡ್​ ನಟಿ ನಟಿಸಿದ್ದರು. ಆ ನಂತರ ಸಲ್ಮಾನ್​ ಅಭಿನಯದ 'ಜೈ ಹೋ' ಮತ್ತು 'ಬಿಗ್​ ಬಾಸ್​'ನಲ್ಲೂ ಕಾಣಿಸಿಕೊಂಡಿದ್ದ ಸನಾ, ಇದೀಗ ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದಾರೆ.

ಸನಾ ಕಳೆದ ಕೆಲವು ವರ್ಷಗಳಿಂದ ನೃತ್ಯ ನಿರ್ದೇಶಕ ಮೆಲ್ವಿನ್​ ಲೂಯಿಸ್​ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ, ಫೆಬ್ರವರಿಯಲ್ಲಿ ಅವರಿಬ್ಬರ ನಡುವೆ ಬ್ರೇಕ್​ಅಪ್​ ಆಗಿತ್ತು. ಅಲ್ಲಿಂದ ಸ್ವಲ್ಪ ದಿನಗಳ ಕಾಲ ಸನಾ ಡಿಪ್ರೆಶನ್​ಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ.

ಇದೀಗ ಸನಾ ತಾವು ಚಿತ್ರರಂಗಕ್ಕೆ ಗುಡ್​ಬೈ ಹೇಳುತ್ತಿರುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿರ್ಗತಿಕರ ಮತ್ತು ಅಸಹಾಯಕರ ಸೇವೆಯಲ್ಲಿ ತಮ್ಮ ಜೀವನವನ್ನು ಸಾಗಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

'ಈ ಮನರಂಜನಾ ಕ್ಷೇತ್ರವು ನನಗೆ ಎಲ್ಲವನ್ನೂ ಕೊಟ್ಟಿದೆ. ಹಣ, ಖ್ಯಾತಿ, ಗೌರವ ಎಲ್ಲವೂ ನನಗೆ ಇಲ್ಲಿಂದ ಸಿಕ್ಕಿದೆ. ಆದರೆ, ಜೀವನದ ಉದ್ದೇಶ ಖ್ಯಾತಿ ಮತ್ತು ಸಂಪತ್ತು ಮಾತ್ರವಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಈ ಕ್ಷೇತ್ರವನ್ನು ಬಿಟ್ಟು, ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುವದಕ್ಕೆ ಯೋಚಿಸಿದ್ದೇನೆ. ಮನುಷ್ಯ ಸತ್ತ ನಂತರ ಏನಾಗುತ್ತಾನೆ ಎಂಬ ಪ್ರಶ್ನೆ ನನ್ನನ್ನು ಹಲವು ದಿನಗಳಿಂದ ಕಾಡುತಿತ್ತು. ಈ ಪ್ರಶ್ನೆಗೆ ನನ್ನ ಧರ್ಮದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ಸೃಷ್ಟಿಕರ್ತನ ಆಜ್ನೆಯಂತೆ ಜೀವಿಸಬೇಕೆಂಬ ಪ್ರೇರೇಪಣೆಯಾಗಿದೆ. ಅದೇ ಕಾರಣಕ್ಕೆ, ಇದೆಲ್ಲವನ್ನೂ ಬಿಟ್ಟು ಬದುಕುವುದಕ್ಕೆ ನಿರ್ಧರಿಸಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net