ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಸಮಂತಾ!

Samantha - Myositis
Published on

ಹೈದರಾಬಾದ್​: ಕಳೆದ ಎರಡು ತಿಂಗಳಿನಿಂದ ಸಮಂತಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ, ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಸಮಂತಾಗೆ ನಿಜಕ್ಕೂ ಏನಾಗಿತ್ತು? ಅವರ ಆರೋಗ್ಯಸ್ಥಿತಿ ಹೇಗಿದೆ? ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.

ಈಗ ಸಮಂತಾ ಕೊನೆಗೂ ತಮಗಿರುವ ಆರೋಗ್ಯಕರ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಕಾಯಿಲೆಯಿಂದ ಮಾಂಸಖಂಡಗಳು ವೀಕ್​ ಆಗುತ್ತವಂತೆ. ಮಾಂಸಖಂಡಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತವಂತೆ.

ಶನಿವಾರ ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಹೇಳಿಕೊಂಡಿರುವ ಸಮಂತಾ, ಒಂದು ಫೋಟೋ ಸಹ ಶೇರ್​ ಮಾಡಿಕೊಂಡಿದ್ದಾರೆ. ಡ್ರಿಪ್ಸ್​ ಹಾಕಿಕೊಂಡೇ ಚಿತ್ರದ ಡಬ್ಬಿಂಗ್​ ಮಾಡುತ್ತಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ.

''ಯಶೋದಾ' ಚಿತ್ರಕ್ಕೆ ಎಲ್ಲರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದೆ. ಜೀವನವೊಡ್ಡುವ ಹಲವು ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುವುದಕ್ಕೆ ಈ ಪ್ರೀತಿ ಕೊಡುವ ಶಕ್ತಿ ಅಷ್ಟಿಷ್ಟಲ್ಲ. ಕೆಲವು ತಿಂಗಳ ಹಿಂದೆ ನನಗೆ ಮಯೋಸೈಟಿಸ್​ ಎಂಬ ಸಮಸ್ಯೆ ಇರುವುದು ಗೊತ್ತಾಯಿತು. ಸೂಕ್ತ ಚಿಕಿತ್ಸೆ ಪಡೆದರೆ ಬೇಗ ಸರಿ ಹೋಗಬಹುದು ಎಂದು ನಂಬಿದ್ದೆ. ಆದರೆ, ನಾನು ಅಂದುಕೊಂಡಿದ್ದಕ್ಕಿಂತ ಇದು ಜಾಸ್ತಿ ಸಮಯ ಪಡೆಯುತ್ತಿದೆ. ವೈದ್ಯರು ನಾನು ಆದಷ್ಟು ಬೇಗ ಹುಷಾರಾಗುತ್ತೀನಿ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ದಿನಗಳೆರಡನ್ನೂ ನೋಡಿದ್ದೇನೆ. ಈ ದಿನ ಸಹ ಬಹಳ ಬೇಗ ಮುಗಿಯುತ್ತದೆ ಮತ್ತು ನಾನು ಹುಷಾರಾಗಿ ಬಹಳ ಬೇಗ ವಾಪಸ್ಸಾಗುತ್ತೇನೆ ಎಂಬ ನಂಬಿಕೆ ನನಗಿದೆ' ಎಂದು ಬರೆದುಕೊಂಡಿದ್ದಾರೆ ಸಮಂತಾ.

ಸಮಂತಾ ಅಭಿನಯದ 'ಯಶೋದಾ' ಚಿತ್ರವು ನವೆಂಬರ್​ 11ರಂದು ಪ್ಯಾನ್​ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದಲ್ಲದೆ 'ಸಿಟಾಡೆಲ್​' ಎಂಬ ಹಿಂದಿ ಸರಣಿಯಲ್ಲಿ ಅವರು ನಟಿಸುತ್ತಿದ್ದಾರೆ. ಜತೆಗೆ, 'ಶಾಕುಂತಲಂ' ಮತ್ತು 'ಖುಷಿ' ಚಿತ್ರಗಳೂ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net