

ಕೋಜಿಕ್ಕೋಡ್: ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್ ಆದೇಶ ನೀಡಿದ್ದು, ಇದರಿಂದಾಗಿ ಚಿತ್ರಮಂದಿರಗಳಲ್ಲಿ ಹಾಡನ್ನು ಪ್ರದರ್ಶಿಸುವಂತಿಲ್ಲ.
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ನಾಲ್ಕನೆಯ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಚಿತ್ರದ 'ವರಾಹ ರೂಪಂ' ಹಾಡನ್ನು ಮಲಯಾಳಂನ ಜನಪ್ರಿಯ ಬಾಂಡ್ ಥಾಯ್ಕುಡಂ ಬ್ರಿಡ್ಜ್ ರೂಪಿಸಿದ್ದ 'ನವರಸಂ' ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ವಾದವನ್ನು ತಳ್ಳಿ ಹಾಕುವುದರ ಜತೆಗೆ, 'ನವರಸಂ' ಹಾಡಿನಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು.
ಈ ಸಂಬಂಧ, ಥಾಯ್ಕುಡಂ ಬ್ರಿಡ್ಜ್ ತಂಡದವರು, 'ಕಾಂತಾರ' ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿ, ಕೇಸ್ ಹಾಕುವುದಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. 'ಎರಡೂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಹಾಡಿನ ಹಕ್ಕುಗಳನ್ನು ಕುರಿತಂತೆ ಚಿತ್ರತಂಡದವರು ನಮಗೆ ಯಾವುದೇ ಕ್ರಿಡಿಟ್ ನೀಡಿಲ್ಲ ಹಾಗೂ ಈ ಹಾಡನ್ನು ಸ್ವಂತ ಸೃಷ್ಟಿ ಎಂಬಂತೆ ಬಳಸಿಕೊಳ್ಳಲಾಗಿದೆ' ಎಂದು ಪೋಸ್ಟ್ ಮಾಡುವುದರ ಜತೆಗೆ, ಈ ಸಂಬಂಧ ಕೋರ್ಟ್ನಲ್ಲಿ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಸಲ್ಲಿಕೆ ಮಾಡಿತ್ತು.
ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್ ‘ವರಾಹ ರೂಪಂ ...’ ಹಾಡಿನ ಮೇಲೆ ನಿರ್ಬಂಧ ಹೇರಿದೆ. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ ...’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಈ ಹಾಡು ಬರಲಿದ್ದು, ಇದೀಗ ಈ ಹಾಡಿಗೆ ಕತ್ತರಿ ಹಾಕುವ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ.
ಇದರಿಂದ ಚಿತ್ರತಂಡಕ್ಕೆ ಸಾಕಷ್ಟು ಹಿನ್ನೆಡೆಯಾಗಿದ್ದು, ಪೂರ್ತಿ ಸ್ಪಷ್ಟತೆ ಸಿಗುವವರೆಗೆ ಹಾಡನ್ನು ಕತ್ತಿರಸಬೇಕಿದೆ. ಚಿತ್ರತಂಡದ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲವಿದೆ.