ನನ್ನ ಸಿನಿಮಾ ಪ್ರೀತಿ ಕಡಿಮೆಯಾಗುವುದಿಲ್ಲ ಎಂದು ಕಣ್ಣೀರು ಹಾಕಿದ ಸಮಂತಾ

Samantha - Emotional
Published on

ಹೈದರಾಬಾದ್​: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದಾಗಿ ಎಲ್ಲೂ ಕಾಣಿಸಿಕೊಳ್ಳದ ಟಾಲಿವುಡ್​ ನಟಿ ಸಮಂತಾ ರುತ್​​ ಪ್ರಭು, ಬಹಳ ದಿನಗಳ ನಂತರ ಮಾಧ್ಯವಮದವರೆದುರು ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಮನಬಿಚ್ಚಿ ಮಾತನಾಡಿರುವ ಅವರು, ವೇದಿಕೆಯ ಮೇಲೆ ಕಣ್ಣೀರು ಸುರಿಸಿದ್ದಾರೆ.

ಇದಾಗಿದ್ದು, ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದ ಟ್ರೈಲರ್​ ಬಿಡುಗಡೆ ಸಮಾರಂಭದಲ್ಲಿ. ಈ ಸಂದರ್ಭದಲ್ಲಿ ಮಾತನಾಡಿದ ಸಮಂತಾ, 'ಕೆಲವರಿಗೆ ಸಿನಿಮಾ ಎಂಬುದು ಅವರ ಜೀವನದ ಒಂದು ಭಾಗ ಅಷ್ಟೇ. ಆದರೆ, ನಿರ್ದೇಶಕ ಗುಣಶೇಖರ್​ ಅವರಿಗೆ ಸಿನಿಮಾನೇ ಜೀವನ. ಅವರು ಈ ಚಿತ್ರವನ್ನು ಬಹಳ ಕಷ್ಟಪಟ್ಟು ಮಾಡಿರುವುದಷ್ಟೇ ಅಲ್ಲ, ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ನಾವು ಸಾಮಾನ್ಯವಾಗಿ ಕಥೆ ಕೇಳುವಾಗ, ಆ ಕಥೆಗೆ ನ್ಯಾಯ ಸಿಗಲಿ ಎಂಬುದನ್ನು ಹಾರೈಸುತ್ತೇವೆ. ಕೆಲವೊಮ್ಮೆ ಮ್ಯಾಜಿಕ್​ ಆಗಿ, ಚಿತ್ರ ಚೆನ್ನಾಗಿರುವುದಷ್ಟೇ ಅಲ್ಲ, ಅದ್ಭುತವಾಗಿ ಮೂಡಿಬರುತ್ತದೆ. ಈ ಚಿತ್ರ ಸಹ ಒಂದು ಮ್ಯಾಜಿಕ್​. ಚಿತ್ರ ನೋಡಿ ಗುಣಶೇಖರ್​ ಅವರ ಕಾಲಿಗೆ ಬಿದ್ದೆ. ಜೀವನದಲ್ಲಿ ಸಾಕಷ್ಟು ಹೋರಾಟ ನೋಡಿದ್ದೃನೆ. ಜೀವನದಲ್ಲಿ ಎಷ್ಟೇ ಬದಲಾವಣೆಗಳಾದರೂ, ನನ್ನ ಸಿನಿಮಾ ಪ್ರೀತಿ ಯಾವತ್ತೂ ಬದಲಾಗುವುದಿಲ್ಲ. ಜಾಸ್ತಿ ಆಗುತ್ತದೆಯೇ ಹೊರತು, ಕಡಿಮೆ ಆಗುವುದಿಲ್ಲ' ಎಂದು ಹೇಳಿದರು.

ಇನ್ನು, ನಿರ್ದೇಶಕ ಗುಣಶೇಖರ್​, ಈ ಚಿತ್ರಕ್ಕೆ ಸಮಂತಾ ಸಹ ಒಬ್ಬ ಹೀರೋ, ಅವರಿಲ್ಲದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ ಎಂಬ ಮಾತಿಗೆ ಸಮಂತಾ ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

'ಶಾಕುಂತಲಂ' ಚಿತ್ರವನ್ನು ಗುಣ ಟೀಂವರ್ಕ್ಸ್​ ಬ್ಯಾನರ್​ನಡಿ ನಿರ್ಮಾಣವಾಗಿದ್ದು, ಕಾಳಿದಾಸನ 'ಅಭಜ್ನಾನ ಶಾಕುಂತಲ'ವನ್ನು ಆಧರಿಸಿದೆ. ಈ ಚಿತ್ರದಲ್ಲಿ ಸಮಂತಾ ಜತೆಗೆ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹ, ಮೋಹನ್​ ಬಾಬು, ಸಚಿನ್​ ಖೇಡೇಕರ್​, ಗೌತಮಿ ಮುಂತಾದವರು ನಟಿಸಿದ್ದು, ಚಿತ್ರವು ಫೆಬ್ರವರಿ 17ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net