'ಶೆಹಜಾದ' ಚಿತ್ರದ ಮೂಲಕ ನಿರ್ಮಾಪಕನಾದ ಕಾರ್ತಿಕ್​ ಆರ್ಯನ್​

Shehzada
Published on

ಮುಂಬೈ: ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಚಿತ್ರರಂಗಕ್ಕೆ ಬಂದು ಹೆಚ್ಚು ಸಮಯವಾಗಿಲ್ಲ. ಹಾಗೆಯೇ ಅಭಿನಯಿಸಿದ ಚಿತ್ರಗಳ ಸಂಖ್ಯೆಯೂ ಹೆಚ್ಚೇನಿಲ್ಲ. ಇಲ್ಲಿಯವರೆಗೂ ನಟರಾಗಿದ್ದ ಆರ್ಯನ್​, ಇದೀಗ ನಿರ್ಮಾಪಕರೂ ಆಗಿದ್ದಾರೆ. ಮುಂದಿನ ತಿಂಗಳು ಕಾರ್ತಿಕ್​ ಅಭಿನಯದ 'ಶೆಹಜಾದ' ಚಿತ್ರವು ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ನಿರ್ಮಾಪಕರಲ್ಲಿ ಅವರೂ ಒಬ್ಬರು.

ಹೀರೋಗಳು ನಿರ್ಮಾಣ ಕ್ಷೇತ್ರಕ್ಕಿಳಿಯುವುದು, ಚಿತ್ರಗಳನ್ನು ನಿರ್ಮಿಸುವುದು ಹೊಸ ವಿಷಯವಲ್ಲ. ಈಗಾಗಲೇ ಎಲ್ಲ ಭಾಷೆಗಳಲ್ಲೂ ಸಾಕಷ್ಟು ಹೀರೋಗಳು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ತಿಕ್​ ಸಹ ಈ ಪಟ್ಟಿಗೆ ಹೇಗೆ ಸೇರಿಕೊಂಡರು ಎಂಬುದಕ್ಕೆ ಒಂದು ಸಣ್ಣ ಕಥೆ ಇದೆ.

ಕಾರ್ತಿಕ್​ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಐಡಿಯಾ ಇರಲಿಲ್ಲವಂತೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ನಿರ್ಮಾಣಕ್ಕೆ ಇಳಿಯಬೇಕಾಯಿತಂತೆ. ಅದೇನೆಂದರೆ, 'ಶೆಹಜಾದ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಯಿತಂತೆ. ಚಿತ್ರ ನಿಂತು ಹೋಗುವ ಪರಿಸ್ಥಿತಿ ಎದುರಾದಾಗ, ಕಾರ್ತಿಕ್​ ಆರ್ಯನ್​ ಮುಂದೆ ಬಂದು ಚಿತ್ರದ ಸಂಭಾವನೆಯನ್ನು ಬಿಟ್ಟುಬಿಡುವುದಾಗಿ ಹೇಳಿದರಂತೆ. ಹಾಗಾಗಿ, ಅವರಿಗೂ ನಿರ್ಮಾಪಕರ ಸ್ಥಾನಮಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

'ಶೆಹಜಾದ' ಚಿತ್ರವು ತೆಲುಗಿನ 'ಅಲಾ ವೈಕುಂಟಪುರಂಲೋ' ಚಿತ್ರದ ರೀಮೇಕ್​ ಆಗಿದ್ದು, ರೋಹಿತ್​ ಧವನ್​ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್​ ಆರ್ಯನ್​ಗೆ ನಾಯಕಿಯಾಗಿ ಕೃತಿ ಸನಾನ್​ ಅಭಿನಯಿಸಿದ್ದು, ಮಿಕ್ಕಂತೆ ಮನೀಷಾ ಕೊಯಿರಾಲ, ರೊನಿತ್​ ರಾಯ್​, ಪರೇಶ್​ ರಾವಲ್​ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವು ಫೆಬ್ರವರಿ 10ರಂದು ಬಿಡುಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net