ಫಾರ್ಮ್​ಹೌಸ್​ನಲ್ಲಿ ಕುಟುಂಬದೊಟ್ಟಿಗೆ 55ನೇ ಬರ್ತ್​ಡೇ ಆಚರಿಸಿದ ಸಲ್ಮಾನ್​ ಖಾನ್

945912-salmankhan-55birthday-salmankhan
Published on

ಮುಂಬೈ: ಸಲ್ಮಾನ್​ ಖಾನ್​ ಜನ್ಮದಿನವೆಂದರೆ, ಅಭಿಮಾನಿಗಳ ಪಾಲಿನ ಹಬ್ಬವದು. ಆದರೆ, ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಅದ್ದೂರಿ ಜನ್ಮದಿನ ಆಚರಣೆಗೆ ಸಲ್ಮಾನ್​ ಬ್ರೇಕ್​ ಹಾಕಿದ್ದಾರೆ. ಸರಳವಾಗಿ ಕುಟುಂಬ ಮತ್ತು ಆಪ್ತರೊಂದಿಗೆ 55ನೇ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಮನೆ ಬಳಿ ಬರಬೇಡಿ, ಇದ್ದಲ್ಲಿಂದಲೇ ಆಶೀರ್ವದಿಸಿ ಎಂದೂ ಸಲ್ಮಾನ್​ ಕೋರಿದ್ದಾರೆ.

ಮುಂಬೈ ಹೊರವಲಯದಲ್ಲಿರುವ ಪಾನ್ವೆಲ್​ ಫಾರ್ಮ್​ಹೌಸ್​ನಲ್ಲಿ ಶನಿವಾರ ರಾತ್ರಿ ವೇಳೆಗೆ ಸಲ್ಮಾನ್​ ಜನ್ಮದಿನ ಆಚರಿಸಿಕೊಂಡಿದ್ದಾರೆ. ತಂದೆ ಸಲೀಮ್ ಖಾನ್, ಅಲ್ವಿರಾ ಅಗ್ನಿಹೋತ್ರಿ, ಸುನೀಲ್ ಗ್ರೋವರ್, ಸೂರಜ್ ಪಾಂಚೋಲಿ ಸೇರಿ ಹಲವು ಬಾಲಿವುಡ್​ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸದ್ಯ ‘ರಾಧೆ’ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿರುವ ಸಲ್ಮಾನ್​ ಖಾನ್, ಇದರ ಜತೆಗೆ ಆಯುಷ್ ಶರ್ಮಾ ಅವರ ಅಂತಿಮ್ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಎಲ್ಲೆಡೆ ವೈರಲ್​ ಆಗಿದೆ.

ಇನ್ನು ಸಲ್ಮಾನ್​ ಖಾನ್​ ಜನ್ಮದಿನದ ಪ್ರಯುಕ್ತ ಅವರ ನಟನೆಯ ಸಿನಿಮಾಗಳಿಂದ ಯಾವುದೇ ವಿಶೇಷ ಪೋಸ್ಟರ್ ಆಗಲಿ, ಟೀಸರ್​ಗಳಾಗಲಿ ಹೊರಬಂದಿಲ್ಲ. ಬದಲಿಗೆ ಶೀಘ್ರದಲ್ಲಿ ರಾಧೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದೇವೆ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ನಿರಾಸೆಯುಂಟು ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net