ವಿದೇಶಿ ಚಿತ್ರೀಕರಣಕ್ಕೆ ಸಲ್ಮಾನ್​ ಗುಡ್​ ಬೈ; ಮುಂಬೈ ಸ್ಟುಡಿಯೋದಲ್ಲಿಯೇ ಎಲ್ಲವೂ ಸೃಷ್ಟಿ..

breaking-radhe-koimoi
Published on

ಸಲ್ಮಾನ್​ ಖಾನ್​ ನಾಯಕತ್ವದ ‘ರಾಧೆ; ಯುವರ್​ ಮೋಸ್ಟ್ ವಾಂಟೆಡ್​ ಭಾಯ್​’ ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​ ಸ್ಥಗಿತಗೊಂಡಿತು. ಕಳೆದ ನಾಲ್ಕು ತಿಂಗಳಿಂದ ಯಾವ ಕೆಲಸಗಳೂ ಶುರುವಾಗಲಿಲ್ಲ. ಇದೀಗ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಮತ್ತೆ ಶೂಟಿಂಗ್​ ಆರಂಭಿಸಲು ಚಿತ್ರತಂಡ ಪ್ಲ್ಯಾನ್​ ಹಾಕಿದ್ದು, ಸಲ್ಮಾನ್​ ಖಾನ್​ ಸಹ ಪಾಲ್ಗೊಳ್ಳಲಿದ್ದಾರೆ.

ಪ್ರಭುದೇವ ನಿರ್ದೇಶನದ ಈ ಸಿನಿಮಾದ ಹಾಡುಗಳ ಚಿತ್ರೀಕರಣಕ್ಕೆ ಅಝರ್​ಬೈಜಾನ್​ ದೇಶಕ್ಕೆ ತೆರಳುವ ನಿರ್ಧಾರ ಕೈಗೊಂಡಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ವಿದೇಶಿ ಚಿತ್ರೀಕರಣಕ್ಕೆ ಬೈ ಬೈ ಹೇಳಿರುವ ನಿರ್ದೇಶಕರು, ಮುಂಬೈನ ಸಿಟಿ ಸ್ಟುಡಿಯೋದಲ್ಲಿಯೇ ಹಾಡು ಮತ್ತು ಆ್ಯಕ್ಷನ್​ ಸನ್ನಿವೇಶದ ಚಿತ್ರೀಕರಣ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಗ್ರೀನ್​ ಪರದೆಯ ಮುಂದೆ ಚಿತ್ರೀಕರಣ ಮಾಡಿಕೊಂಡು, ಅದಕ್ಕೆ ವಿಎಫ್​ಎಕ್ಸ್ ಟಚ್​ ಕೊಟ್ಟು, ವಿದೇಶದಂತೆ ಬಿಂಬಿಸಲಿದ್ದಾರೆ.

ಅಂದಹಾಗೆ, ಚಿತ್ರದ ಬಹುತೇಕ ಶೂಟಿಂಗ್​ ಮುಕ್ತಾಯವಾಗಿದೆ. ಇನ್ನು 10ರಿಂದ 12 ದಿನಗಳ ಚಿತ್ರೀಕರಣ ಮಾಡಿಕೊಂಡರೆ ಸಿನಿಮಾ ಮುಕ್ತಾಯವಾಗಲಿದೆ. ಸಲ್ಮಾನ್​ ಖಾನ್​ ಸಹ ಶೂಟಿಂಗ್​ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ದಿಶಾ ಪಠಾಣಿ ಸಹ ಪಾಲ್ಗೊಳ್ಳಲಿದ್ದಾರೆ. ಸದ್ಯ ನಿರ್ಮಾಪಕರ ಪ್ರಕಾರ ಅಕ್ಟೋಬರ್​ ನವೆಂಬರ್ ವೇಳೆಗೆ ಸಿನಿಮಾ ತೆರೆಕಾಣಿಸಬೇಕೆಂಬ ಪ್ಲ್ಯಾನ್​ ಹಾಕಿದ್ದಾರೆ. ದೀಪಾವಳಿಯಂದೇ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆಯಾದರೂ, ಕರೊನಾ ಹಾವಳಿಯ ಸ್ಥಿತಿಗತಿ ನೋಡಿಕೊಂಡು ಮುಂದಿವರಿಯಲಿದ್ದಾರೆ ನಿರ್ಮಾಪಕರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net