ಅಮ್ಮನಿಗೆ ಹಾರ್ಟ್​ ಆಪರೇಷನ್​ ಮಾಡಿಸಿದ್ದು ಸಲ್ಮಾನ್​ ... ಥ್ಯಾಂಕ್ಸ್​ ಹೇಳಿದ ಸರೋಜ್​ ಪುತ್ರಿ

Salman - Saroj - Final
Published on

ಕೆಲವು ವರ್ಷಗಳ ಹಿಂದೆ ಬಾಲಿವುಡ್​ನಲ್ಲಿ ಒಂದು ದೊಡ್ಡ ಗುಲ್ಲು ಇತ್ತು. ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಮತ್ತು ಸ್ಟಾರ್​ ಕೊರಿಯೋಗ್ರಾಫರ್​ ಸರೋಜ್​ ಖಾನ್​ ನಡುವೆ ದೊಡ್ಡ ಜಗಳವಾಗಿದೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ, ಇಬ್ಬರೂ ಒಂದಿಷ್ಟು ದಿನಗಳ ಕಾಲ ಜತೆಯಾಗಿ ಕೆಲಸ ಮಾಡಿರಲಿಲ್ಲ. ಆ ನಂತರ ಅವರಿಬ್ಬರೂ ಹಳೆಯ ಜಗಳಗಳನ್ನು ಮರೆತು, ಒಟ್ಟಿಗೆ ಕೆಲಸ ಮಾಡತೊಡಗಿದರು.

ಬಾಲಿವುಡ್​ನಲ್ಲಿ ಈಗಲೂ ಈ ವಿಷಯ ಪ್ರಸ್ತಾಪವಾಗುತ್ತಲೇ ಇರುತ್ತದೆ. ಆದರೆ, ಇವೆಲ್ಲಾ ಮುಗಿದ ಕಥೆಯಷ್ಟೇ ಅಲ್ಲ, ಸಲ್ಮಾನ್​ ಖಾನ್​ ತಮ್ಮ ತಾಯಿಗೆ ಬಹಳ ಹತ್ತಿರವಾಗಿದ್ದರು ಎಂದು ಸರೋಜ್​ ಪುತ್ರಿ ಸುಖೈನಾ ಖಾನ್​ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ತಾಯಿಗೆ ಹಾರ್ಟ್​ ಆಪರೇಷನ್​ ಮಾಡಿಸಿದ್ದು ಸಹ ಅವರೇ ಎಂದು ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಅಮ್ಮ ಮತ್ತು ಸಲ್ಮಾನ್​ ನಡುವೆ ಆಗಿದ್ದ ಗಲಾಟೆ ಈಗ ಮುಗಿದ ಕಥೆ. ಆ ನಂತರ ಅವರಿಬ್ಬರೂ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಇನ್​ ಫ್ಯಾಕ್ಟ್​, ಅಮ್ಮಗೆ ಹಾರ್ಟ್​ ಆಪರೇಷನ್​ ಮಾಡಿಸಬೇಕು ಎಂಬ ವಿಷಯ ಸಲ್ಮಾನ್​ಗೆ ಗೊತ್ತಾದಾಗ, ಅವರು ಸಹಾಯ ಮಾಡಿದರು. ಅವರು ತಮ್ಮ ತಂಡದ ಸಂಧ್ಯಾ ಎಂಬ ಹುಡುಗಿಯನ್ನು ಗೊತ್ತು ಮಾಡಿ, ಏನೆಲ್ಲಾ ಅಗತ್ಯವಿದೆಯೋ, ಅವನ್ನೆಲ್ಲಾ ನೋಡಿಕೊಳ್ಳುವಂತೆ ಹೇಳಿದ್ದರು. ಆಪರೇಷನ್​ ನಂತರವೂ, ಬಂಡೆಯಂತೆ ಅವರು ನಮ್ಮ ಸಪೋಟ್​ರ್ಗೆ ಇದ್ದರು' ಎಂದು ಸುಖೈನಾ ಹೇಳಿಕೊಂಡಿದ್ದಾರೆ.

ಇನ್ನು ಸಲ್ಮಾನ್​ ಮತ್ತು ಸರೋಜ್​ ಖಾನ್​ ನಡುವೆ ಜಗಳ ಆಗಿತ್ತು ಎಂಬ ಸುದ್ದಿಯ ಕುರಿತು ಮಾತನಾಡಿರುವ ಅವುರ, 'ಜನ ಯಾಕೆ ಆ ಬಗ್ಗೆ ಇನ್ನೂ ತಲೆ ಕೆಡಿಸಿಕೊಂಡಿದ್ದಾರೋ ಗೊತ್ತಿಲ್ಲ. ಅವರಿಬ್ಬರೇ ಅದನ್ನೆಲ್ಲಾ ಮರೆತು ಒಂದಾಗಿದ್ದರು. ಒಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡು, ತಮ್ಮ ನಡುವೆ ಸಮಸ್ಯೆ ಇಲ್ಲ ಎಂದು ಸಾರಿದ್ದರು. ಅಷ್ಟಾದರೂ, ಜನ ಯಾಕೆ ಹಳೆಯ ವಿಷಯವನ್ನು ಕೆದಕುತ್ತಾರೋ ಗೊತ್ತಿಲ್ಲ' ಎಂದು ಸುಖೈನಾ ಮಾತನಾಡಿದ್ದಾರೆ.

ಸರೋಜ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಇತ್ತೀಚಿನ ವರ್ಷಗಳಲ್ಲಿ ಅದೆಷ್ಟು ಹತ್ತಿರವಾಗಿದ್ದರೂ ಎಂದು ಸುಖೈನಾ ಹೇಳಿಕೊಂಡಿದ್ದಾರೆ. 'ಅಮ್ಮನಿಗೆ ಒಂದು ಹಂತದಲ್ಲಿ ಕೆಲಸ ಕಡಿಮೆಯಾದಾಗ, ಒಮ್ಮೆ ಸಲ್ಮಾನ್​ ಖಾನ್​ ಅವರ ಬಳಿ ಈ ವಿಷಯವನ್ನು ಹೇಳಿಕೊಂಡಿದ್ದರು. ತಕ್ಷಣವೇ ಸಲ್ಮಾನ್​ ತಮ್ಮ ಮುಂದಿನ ಚಿತ್ರಕ್ಕೆ ಅಮ್ಮನಿಂದ ನೃತ್ಯ ನಿರ್ದೇಶನ ಮಾಡಿಸಿದ್ದರು. ಸಲ್ಮಾನ್​ ಖಾನ್​ ಬಗ್ಗೆ ಸಾಕಷ್ಟು ಜನ ನೆಗೆಟಿವ್​ ಸುದ್ದಿಗಳನ್ನು ಹಬ್ಬಿಸಿದ್ದಾರೆ. ಆದರೆ, ಅವರು ತಮ್ಮ ಹತ್ತಿರದವರ ಬಗ್ಗೆ ಎಷ್ಟು ಕೇರ್​ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ' ಎಂದು ಮಾತು ಮುಗಿಸಿದ್ದಾರೆ ಸುಖೈನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net