

ಬಾಹುಬಲಿ ಸಿನಿಮಾ ತೆರೆಗೆ ಬಂದಿದ್ದೇ ತಡ, ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದರು. ತೆಲುಗಿನಲ್ಲಷ್ಟೇ ಇದ್ದ ಅಭಿಮಾನಿ ಬಳಗ ರಾಷ್ಟ್ರವ್ಯಾಪಿ ವಿಸ್ತರಿಸಿತು. ಅದಾದ ಬಳಿಕ ಬಂದ ಸಾಹೋ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಅಲ್ಲಿಂದ ಇಲ್ಲಿಯವರೆಗೂ ಪ್ರಭಾಸ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾದು ಕುಳಿತಿದ್ದೇ ಬಂತು, ಯಾವುದೇ ಅಪ್ಡೇಟ್ ಮಾಹಿತಿ ಹೊರಬರಲಿಲ್ಲ. ಇದೀಗ ಆ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಗೊತ್ತಿರುವಂತೆ ಜಿಲ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಜತೆ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಆ ಚಿತ್ರದ ಶೂಟಿಂಗ್ಗೆ ಚಾಲನೆ ಸಿಗಲಿದೆ. ಬಳಿಕ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಜತೆಗೂ ದೊಡ್ಡ ಬಜೆಟ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶ್ವಿನ್ ದತ್ ಆ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇದೀಗ ಮೂರನೇ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಚಾರ್ಲಿಗೆ ಜತೆಯಾದ ದಾನಿಶ್
ಬಾಲಿವುಡ್ನ ಖ್ಯಾತ ನಿರ್ದೇಶಕರೊಬ್ಬರು ಪ್ರಭಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಯೂವಿ ಪ್ರೊಡಕ್ಷನ್ನಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಪ್ರಭಾಸ್ ಹಿಂದೆಂದೂ ಕಾಣಿಸಿದ ಲುಕ್ನಲ್ಲಿ ಮತ್ತು ವಿಭಿನ್ನ ಕಥೆ ಮೂಲಕ ಆ ಸಿನಿಮಾ ಶುರುವಾಗಲಿದೆಯಂತೆ. ಆದರೆ, ಸದ್ಯಕ್ಕೆ ಎರಡು ಸಿನಿಮಾ ಕೈಯಲ್ಲಿರುವುದರಿಂದ ಆ ಸಿನಿಮಾ ಮುಗಿದ ಬಳಿಕವಷ್ಟೇ ಈ ಪ್ರಾಜೆಕ್ಟ್ ನತ್ತ ವಾಲಲಿದ್ದಾರೆ. (ಏಜೆನ್ಸೀಸ್)