

Prashanth Neel : ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್ ಭಾಗ 1' ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ (ಡಿಸೆಂಬರ್ 22) ದೇಶಾದ್ಯಂತ ಬಿಡುಗಡೆಯಾಯಿತು. ಅಲ್ಲದೆ, ಬಾಕ್ಸ್ಆಫೀಸ್ನಲ್ಲಿ ಭಾರಿ ಸದ್ದು ಕೂಡ ಮಾಡಿತು.
ಇದೀಗ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅಭಿಮಾನಿಗಳು ‘ಸಲಾರ್’ ಸಿನಿಮಾದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಪ್ರಶಾಂತ್ ನೀಲ್ ಕೂಡ ಇತ್ತೀಚಗೆ ನಡೆದ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿ, ಬಹಳಷ್ಟು ವಿಷಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.
ಸಲಾರ್ ಭಾಗ 1ರ ಫಲಿತಾಂಶದಿಂದ ನನಗೆ ಸಂತೋಷವಾಗಲಿಲ್ಲ. ಏಕೆಂದರೆ, ನಾನು ಮೊದಲ ಭಾಗದ ಸಿನಿಮಾಗಾಗಿ ಬಹಳಷ್ಟು ಶ್ರಮಿಸಿದ್ದೇನೆ. ಆದರೆ, ಎಲ್ಲೋ ಕೆಜಿಎಫ್ 2ರ ಛಾಯೆಗಳು ಕಂಡುಬಂದವು. ಆದರೆ, ನಾನು ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರವನ್ನಾಗಿ 'ಸಲಾರ್ 2' ಮಾಡುತ್ತೇನೆ. ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ.
ಅಂದಹಾಗೆ ಪ್ರಶಾಂತ್ ನೀಲ್ ಅವರು ಹೇಳಿದ್ದು ಸರಿ ಇದೆ. ಏಕೆಂದರೆ ಕಳೆದ ವರ್ಷ ‘ಸಲಾರ್’ ಸಿನಿಮಾ ನೋಡಿದ ಹಲವರು ‘ಕೆಜಿಎಫ್’ಗೆ ಹೋಲಿಕೆ ಮಾಡಿದರು. ಆದರೆ ಈ ಸಿನಿಮಾ ಒಟಿಟಿಯಲ್ಲಿ ಬ್ಲಾಕ್ಬಸ್ಟರ್ ಯಶಸ್ಸು ಗಳಿಸಿತು.
ಇನ್ನು ಸಲಾರ್ 2 ಸಿನಿಮಾಗೆ ಸ್ವಲ್ಪ ಸಮಯ ಹಿಡಿಯಲಿದೆಯಂತೆ. ಏಕೆಂದರೆ ಪ್ರಶಾಂತ್ ನೀಲ್ ಸದ್ಯ ಎನ್ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಶೂಟಿಂಗ್ ಶುರುವಾಗಲಿದೆ. ಲೆಕ್ಕಾಚಾರದ ಪ್ರಕಾರ, 2026ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದ್ದರೂ, ವಿಳಂಬವಾಗುವ ಸಾಧ್ಯತೆಗಳು ಹೆಚ್ಚು. 2026ರ ಬೇಸಿಗೆಯ ನಂತರ 'ಸಲಾರ್ 2' ಚಿತ್ರೀಕರಣ ಆರಂಭವಾಗಬಹುದು. 2027-28ರಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ. (ಏಜೆನ್ಸೀಸ್)