

Richa Ghosh : ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕಂ ಬ್ಯಾಟ್ಸ್ವುಮನ್ ರಿಚಾ ಘೋಷ್ ಅವರು ಅಪರೂಪದ ಸಾಧನೆ ಮಾಡಿದ್ದಾರೆ. ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟ್ಸ್ವುಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೇ ವೇಳೆ ರಿಚಾ ಘೋಷ್, ವಿಶ್ವ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ರಿಚಾ ಅವರು ಈ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ರಿಚಾ ಅವರು ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿದರು. ಒಟ್ಟಾರೆ ಈ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿದ ರಿಚಾ ಮೂರು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ವೇಗವಾಗಿ ಅರ್ಧಶತಕ ಬಾರಿಸಿದ ಮಹಿಳಾ ಕ್ರಿಕೆಟರ್ಸ್
* ರಿಚಾ ಘೋಷ್ (ಭಾರತ) : ವೆಸ್ಟ್ ಇಂಡೀಸ್ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ (2024)
* ಸೋಫಿ ಡಿವೈನ್ (ನ್ಯೂಜಿಲೆಂಡ್) : ಭಾರತ ವಿರುದ್ಧ 18 ಎಸೆತಗಳಲ್ಲಿ (2015)
* ಫೋಬೆ ಲಿಚ್ಫೀಲ್ಡ್ (ಆಸ್ಟ್ರೇಲಿಯಾ) : ವೆಸ್ಟ್ ಇಂಡೀಸ್ ವಿರುದ್ಧ 18 ಎಸೆತಗಳಲ್ಲಿ (2023)
* ನಿದಾ ದಾರ್ (ಪಾಕಿಸ್ತಾನ) : ದಕ್ಷಿಣ ಆಫ್ರಿಕಾ ವಿರುದ್ಧ 20 ಎಸೆತಗಳಲ್ಲಿ (2019)
* ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ) : ಐರ್ಲೆಂಡ್ ವಿರುದ್ಧ 21 ಎಸೆತಗಳಲ್ಲಿ (2018)
* ಸೋಫಿ ಡಿವೈನ್ (ನ್ಯೂಜಿಲೆಂಡ್) : ಐರ್ಲೆಂಡ್ ವಿರುದ್ಧ 21 ಎಸೆತಗಳಲ್ಲಿ (2018)
* ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್) : ಐರ್ಲೆಂಡ್ 21 ಎಸೆತಗಳಲ್ಲಿ (2023)
ಪಂದ್ಯದ ವಿಚಾರಕ್ಕೆ ಬರುವುದಾದರೆ ಟೀಮ್ ಇಂಡಿಯಾದ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಭಾರತದ ಬ್ಯಾಟ್ಸ್ವುಮೆನ್ಗಳ ಪೈಕಿ ಸ್ಮೃತಿ ಮಂಧಾನ (77 ರನ್ 47 ಎಸೆತ, 13 ಬೌಂಡರಿ, 1 ಸಿಕ್ಸರ್) ಮತ್ತು ರಿಚಾ ಘೋಷ್ (54 ರನ್ 21 ಎಸೆತ 3 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಜೆಮಿಮಾ ರೋಡ್ರಿಗಸ್ (31) ಮತ್ತು ರಾಘವಿ ಬಿಷ್ಟ್ (ಅಜೇಯ 31) ಮಿಂಚಿದರು.
ನಂತರ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 157 ರನ್ಗಳಿಗೆ ಸೀಮಿತವಾಯಿತು. ಭಾರತದ ಬೌಲರ್ಗಳ ಪರ ರಾಧಾ ಯಾದವ್ ನಾಲ್ಕು ವಿಕೆಟ್ ಪಡೆದರು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. (ಏಜೆನ್ಸೀಸ್)