

YouTube : ಯೂಟ್ಯೂಬ್ ಕಂಪನಿ ಭಾರತದಲ್ಲಿ ತನ್ನ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲು ಸಿದ್ಧವಾಗಿದೆ. ತಪ್ಪುದಾರಿಗೆಳೆಯುವ ವಿಡಿಯೋ ಟೈಟಲ್ ಮತ್ತು ಥಂಬ್ನೇಲ್ಗಳ ವಿರುದ್ಧ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತಿದೆ. ಇನ್ಮುಂದೆ ಯಾವುದೇ ಗಿಮಿಕ್ ನಡೆಯುವುದಿಲ್ಲ. ಇಂತಹ ವಿಡಿಯೋಗಳನ್ನು ಯೂಟ್ಯೂಬ್ ಕ್ಲಿಕ್ಬೈಟ್ ವಿಡಿಯೋಗಳೆಂದು ವಿವರಿಸುತ್ತದೆ. ಕೇವಲ ಕ್ಲಿಕ್ಗಾಗಿ ದಾರಿತಪ್ಪಿಸುವ ಥಂಬ್ನೇಲ್ಗಳ ವಿರುದ್ಧ ಯೂಟ್ಯೂಬ್ ಕ್ರಮ ಕೈಗೊಳ್ಳಲಿದೆ.
ಗೂಗಲ್ ಇಂಡಿಯಾದಲ್ಲಿನ ಬ್ಲಾಗ್ ಪೋಸ್ಟ್ನಲ್ಲಿ ಕಂಪನಿಯು ಕೆಲವು ಶೀರ್ಷಿಕೆಗಳು ಮತ್ತು ಥಂಬ್ನೇಲ್ಗಳು ಯೂಟ್ಯೂಬ್ ಬಳಕೆದಾರರನ್ನು ತಪ್ಪುದಾರಿಗೆಳೆಯುವ, ಹತಾಶಗೊಳಿಸುವಂತಿವೆ ಎಂದು ಹೇಳಿಕೊಂಡಿದೆ. ಬಳಕೆದಾರರು ತುರ್ತು ಅಥವಾ ಪ್ರಮುಖ ಮಾಹಿತಿಗಾಗಿ ಹುಡುಕುತ್ತಿರುವಾಗ ಈ ರೀತಿಯ ದಾರಿತಪ್ಪಿಸುವ ವಿಡಿಯೋಗಳು ಹೆಚ್ಚಾಗಿ ಬರುತ್ತಿವೆ ಎಂದು ಯೂಟ್ಯೂಬ್ ವಿವರಿಸಿದೆ.
ಬ್ರೇಕಿಂಗ್ ನ್ಯೂಸ್ ಮತ್ತು ಪ್ರಸ್ತುತ ಘಟನೆಗಳನ್ನು ಒಳಗೊಂಡ ವಿಡಿಯೋಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತದೆ. ಬ್ರೇಕಿಂಗ್ ನ್ಯೂಸ್ ಶೀರ್ಷಿಕೆಯ ವಿಡಿಯೋಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಯೂಟ್ಯೂಬ್ ಹೇಳಿದೆ.
ಚಾನಲ್ಗಳಿಗೆ ಸ್ಟ್ರೈಕ್ ನೀಡದೆಯೇ ಯೂಟ್ಯೂಬ್ ಇಂತಹ ವಿಡಿಯೊಗಳನ್ನು ಆರಂಭದಲ್ಲಿ ತೆಗೆದುಹಾಕುತ್ತದೆ. ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಲು ಕಂಟೆಂಟ್ ಕ್ರಿಯೇಟರ್ಸ್ಗೆ ಸಮಯವನ್ನು ನೀಡುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪ್ಲಾಟ್ಫಾರ್ಮ್ನಲ್ಲಿರುವ ವಿಡಿಯೋಗಳಿಗಿಂತ ಹೊಸದಾಗಿ ಅಪ್ಲೋಡ್ ಮಾಡಲಾಗುವ ವಿಡಿಯೋಗಳ ಮೇಲಿನ ಹೆಚ್ಚಿನ ನಿರ್ಬಂಧಗಳನ್ನು ಬಿಗಿಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಆದರೆ, ಯೂಟ್ಯೂಬ್ ಸುದ್ದಿ ಮತ್ತು ಪ್ರಸ್ತುತ ಘಟನೆಗಳನ್ನು ಹೇಗೆ ವರ್ಗೀಕರಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಇದಲ್ಲದೆ, ಕ್ರೀಡೆ ಮತ್ತು ಮನರಂಜನೆಯಂತಹ ಸುದ್ದಿಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಗೆ ನಿರ್ಬಂಧವು ಅನ್ವಯಿಸುತ್ತದೆಯೇ ಎಂಬುದರ ಕುರಿತು ಯಾವುದೇ ಸೂಚನೆಯಿಲ್ಲ. ಥಂಬ್ನೇಲ್ಗಳು, ಶೀರ್ಷಿಕೆಗಳು ಮತ್ತು ವಿಡಿಯೋ ಕಂಟೆಂಟ್ಗಳ ನಡುವಿನ ವ್ಯತ್ಯಾಸಗಳನ್ನು ಹೇಗೆ ಪತ್ತೆ ಮಾಡುತ್ತದೆ ಎಂಬುದನ್ನು ಯೂಟ್ಯೂಬ್ ವಿವರಿಸಿಲ್ಲ. (ಏಜೆನ್ಸೀಸ್)