800 ಕೋಟಿ ಕೊಟ್ಟು ಅರಮನೆಯನ್ನು ವಾಪಸ್ಸು ಪಡೆದರಾ ಸೈಫ್​?

Saif Ali Khan - Final
Published on

ನವದೆಹಲಿ: ಬಾಲಿವುಡ್​ ತುಂಬಾ ಸೈಫ್​ ಅಲಿ ಖಾನ್​​ ಅವರದ್ದೇ ಮಾತು. ಅದಕ್ಕೆ ಕಾರಣ ಸೈಫ್​, ದೆಹಲಿಯಲ್ಲಿರುವ ತಮ್ಮ ಅರಮನೆಯನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಅದಕ್ಕೆ ಅವರು ಖರ್ಚು ಮಾಡಿರುವ ವೆಚ್ಚ 800 ಕೋಟಿ ರೂಗಳು ಎಂದು ಹೇಳಲಾಗುತ್ತಿದೆ.

ಅರಮನೆಯನ್ನು ವಾಪಸ್ಸು ಪಡೆದಿಕೊಂಡಿದ್ದನ್ನು ಸೈಫ್​ ಸಹ ಒಪ್ಪಿಕೊಂಡಿದ್ದಾರೆ. ಆದರೆ, ಅಷ್ಟೊಂದು 800 ಕೋಟಿ ಎನ್ನುವುದು ಉತ್ಪ್ರೇಕೆಯ ಮೊತ್ತ ಎಂಬುದು ಅವರ ಅಭಿಪ್ರಾಯ. ಹಾಗಾದರೆ, ಆ ಅರಮನೆಯನ್ನು ಅವರು ಎಷ್ಟಕ್ಕೆ ಕೊಟ್ಟು ವಾಪಸ್ಸು ಪಡೆದರು ಎಂಬ ಮಾಹಿತಿಯನ್ನು ಅವರು ಹೇಳುವುದಿಲ್ಲ. ದುಡ್ಡು ಎನ್ನುವುದಕ್ಕಿಂತ, ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಹೇಳುತ್ತಾರೆ.

ಹಾಗೆ ನೋಡಿದರೆ, ಸೈಫ್​ ಆ ಅರಮನೆಯನ್ನು ಖರೀದಿಸಿಲ್ಲ. ಅದು ಪಟೌಡಿ ಫ್ಯಾಮಿಲಿಗೆ ಸೇರಿದ ಅರಮನೆಯೇ. ಆದರೆ, ಕೆಲವು ವರ್ಷಗಳ ಹಿಂದೆ ಸೈಫ್​ ಅಲಿ ಖಾನ್​ ಅವರ ತಂದೆ ಮನ್ಸೂರ್​ ಅಲಿ ಖಾನ್​ ಅವರು ಅದನ್ನು ಲೀಸ್​ಗೆ ಕೊಟ್ಟಿದ್ದರಂತೆ. ಈಗ ಆ ಲೀಸ್​ ಹಣವನ್ನು ಮರಳಿಸಿರುವ ಸೈಫ್​, ಅದನ್ನು ತಮ್ಮ ಸುಪರ್ದಿ ಪಡೆದುಕೊಂಡಿದ್ದಾರೆ.

ಆ ಅರಮನೆ ಏನಿಲ್ಲವೆಂದರೂ 100 ವರ್ಷಗಳಷ್ಟು ಹಳೆಯದು ಎಂಬುದು ಸೈಫ್​ ಅಭಿಪ್ರಾಯ. ಅವರ ತಾತ ಇಫ್ತಿಕಾರ್​ ಅಲಿ ಖಾನ್ ಪಟೌಡಿ ಅವರು, ತಮ್ಮ ಪತ್ನಿ ಸಾಜಿದಾ ಸುಲ್ತಾನ್​ ಅವರಿಗಾಗಿ ಕಟ್ಟಿಸಿದ ಅರಮನೆಯಂತೆ ಅದು. ಆ ನಂತರ ಮನ್ಸೂರ್​ ಅಲಿ ಖಾನ್​, ಸೈಫ್​ ಅಲಿ ಖಾನ್​ ಎಲ್ಲರೂ ಅಲ್ಲೇ ಹುಟ್ಟಿ ಬೆಳೆದಿದ್ದಾರೆ.

ಎಲ್ಲಾ ಸರಿ, ಅಷ್ಟು ದೊಡ್ಡ ಅರಮನೆಯನ್ನಿಟ್ಟುಕೊಂಡು ಸೈಫ್​ ಏನು ಮಾಡಬಹುದು ಎಂಬ ಪ್ರಶ್ನೆ ಬರಬಹುದು. ಏನಿಲ್ಲ, ಬಿಡುವಿದ್ದಾಗೆಲ್ಲಾ ಅಲ್ಲಿಗೆ ಬಂದು ಕಾಲ ಕಳೆಯುವುದು ಅವರ ಐಡಿಯಾ. ಕಳೆದ ಒಂದು ತಿಂಗಳಿನಿಂದ ಸೈಫ್​, ತಮ್ಮ ಪತ್ನಿ ಕರೀನಾ ಮತ್ತು ಮಗ ತೈಮುರ್​ ಜತೆಗೆ ಅದೇ ಮನೆಯಲ್ಲಿ ಕಾಲ ಕಳೆದರು. ಜತೆಗೆ ಕರೀನಾ ಅಭಿನಯದ 'ಲಾಲ್​ ಸಿಂಗ್​ ಚಡ್ಢಾ' ಚಿತ್ರದ ಚಿತ್ರೀಕರಣವೂ ದೆಹಲಿಯಲ್ಲೇ ನಡೆಯುತ್ತಿತ್ತು.

ಈಗ ಅದು ಮುಗಿದಿರುವುದರಿಂದ, ಸೈಫ್​ ತಮ್ಮ ಹೆಂಡತಿ ಮತ್ತು ಮಗನ ಜತೆಗೆ ಮುಂಬೈಗೆ ವಾಪಸ್ಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net