

ಬೆಂಗಳೂರು: ಆಗಾಗ್ಗೆ ಸುದ್ದಿ ಮಾಡುತ್ತಲೇ ದಿಢೀರ್ ಕಣ್ಮರೆಯಾಗಿರುವ ನಟಿ, ಮಾಜಿ ಸಂಸದೆ ರಮ್ಯಾ ಸ್ಪಂದನಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಕಾಮಿಡಿ ಷೋ ಒಂದರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿರುವ ನಟಿ, ಕೆಲವೊಂದು ತಮ್ಮ ಗುಟ್ಟುಗಳನ್ನು ಹಂಚಿಕೊಂಡಿದ್ದಾರೆ.
ಕಾಮಿಡಿಯನ್ ಸೋನು ವೇಣುಗೋಪಾಲ್ ಅವರು ನಡೆಸಿರುವ ಈ ಷೋದಲ್ಲಿ ರಮ್ಯಾ ತಮಗೆ ಇಷ್ಟವಾದ ವಸ್ತು, ಪದಾರ್ಥ ಸೇರಿದಂತೆ ತಾವು ಮರೆಯುವ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ. 38 ನಿಮಿಷಗಳ ಈ ಸಂದರ್ಶನದಲ್ಲಿ ನಟಿ ಅನೇಕ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆದರೆ ಒಂದೇ ಒಂದು ವಿಷಯದ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ.
ಮೊದಲಿಗೆ ತಮ್ಮ ಸೌಂದರ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದ ನಟಿ, ನಾನು ಅಷ್ಟೊಂದು ಚೆನ್ನಾಗಿ ಇದೀನಿ ಅಂತ ಅಂದುಕೊಳ್ಳೋದಿಲ್ಲ. ನಾನು ಎವರೇಜ್ ಗರ್ಲ್. ಸಿನಿಮಾ ಮಾಡುವಾಗ ಆರೋಗ್ಯದ ಬಗ್ಗೆ ಹಾಗೂ ಬ್ಯೂಟಿ ಬಗ್ಗೆ ಗಮನ ಕೊಡುತ್ತಿದ್ದೆ. ಸಿನಿಮಾಕ್ಕೆ ಬೇಕು ಎಂದು ಡಯೆಟ್, ವ್ಯಾಯಾಮ ಎಲ್ಲಾ ಮಾಡುತ್ತಿದ್ದೆ. ಈಗ ಸಿನಿಮಾ ಇಲ್ಲದ ಕಾರಣ, ಏನು ಬೇಕೋ ಎಲ್ಲವನ್ನೂ ತಿನ್ನುತ್ತಿದ್ದೇನೆ ಎಂದು ತಮಾಷೆ ಮಾಡಿದರು. ಐಸ್‌ಕ್ರೀಂ, ಜೋಳದ ರೊಟ್ಟಿ-ಎಣ್ಣೆಗಾಯಿ, ಮಶ್ರೂಮ್, ಕೇಕ್ ನನಗಿಷ್ಟ. ಈಗ ಡಯೆಟ್ ಎಲ್ಲಾ ಇಲ್ಲ. ಎಲ್ಲವನ್ನೂ ತಿನ್ನುತ್ತೇನೆ ಆದರೆ ನಾನ್‌ವೆಜ್‌ನಿಂದ ಮಾತ್ರ ದೂರವಿದ್ದೇನೆ ಎಂದರು.
ನನಗೆ ಉತ್ತರಕರ್ನಾಟಕ ಬದನೆಕಾಯಿ ರೊಟ್ಟಿ ಎಂದರೆ ತುಂಬಾ ಇಷ್ಟ. ಐಸ್ ಕ್ರೀಮ್ ತುಂಬಾ ಇಷ್ಟ ಪಟ್ಟು ತಿನ್ನುತ್ತೇನೆ. ಮೊಟ್ಟೆಯಿಂದ ಮಾಡಿರಿವ ಕೇಕ್, ಮಶ್ರೂಮ್ ತಿನ್ನುತ್ತೇನೆ ಎಂದು ತಮ್ಮ ಆಹಾರದ ವಿಷಯ ಹೇಳಿದರು.
ಇಷ್ಟದ ಉಡುಪಿನ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಸೀರೆ ಅಂದ್ರೆ ತುಂಬಾ ಇಷ್ಟ. ಆದರೆ ನಾನು ಎಲ್ಲಿಗೂ ಹೋಗುವುದಿಲ್ಲ. ಹೀಗಾಗಿ ನಾನು ಸೀರೆ ಧರಿಸುವುದು ಕಡಿಮೆ. ನಾನು ಯಾರ ಮದುವೆ ಸಮಾರಂಭಗಳಿಗೆ ಹೋಗುವುದಿಲ್ಲ. ನನ್ನ ಮದುವೆಗೂ ಯಾರೂ ಬರುವುದಿಲ್ಲ ಎಂದು ನನ್ನ ಅಮ್ಮ ಹೇಳುತ್ತಾರೆ. ಆಗ ನಾನು ಅವರಿಗೆ ಒಳ್ಳೆಯದು ಎಂದು ಹೇಳುತ್ತಿರುತ್ತೇನೆ ಎಂದು ಚಟಾಕಿ ಹಾರಿಸಿದರು.
ಲಸಿಕೆ ಹಾಕಿಸಿಕೊಂಡಿರುವಿರಾ ಎಂದ ಪ್ರಶ್ನೆಗೆ ಇಲ್ಲ ನಾನು ಅಮೆರಿಕದ ಲಸಿಕೆಗೆ ವೇಟ್ ಮಾಡುತ್ತಿದ್ದೇನೆ. ಮೊಡೆರ್ನಾಗೆ ಲಸಿಕೆ ಹಾಕಿಸಿಕೊಳ್ಳುವೆ. ಫೈಜರ್ ಲಸಿಕೆಯ ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಶುರುವಾಗಿದೆ. ಆದ್ದರಿಂದ ಸದ್ಯ ಮೊಡೆರ್ನಾಗೆ ಕಾಯುತ್ತಿದ್ದೇನೆ ಎಂದರು. ನೀವು ತುಂಬಾ ಮರೆಯುವುದು ಯಾವುದನ್ನು ಎಂಬ ಪ್ರಶ್ನೆಗೆ ರಮ್ಯಾ, ನಾನು ಆಗಾಗ ಮೊಬೈಲ್, ಕನ್ನಡಕ ಮತ್ತು ಟೀತ್ ಐಲೈನರನ್ನು ಮರೆತು ಹೋಗುತ್ತೇನೆ ಎಂದರು.
ಹಾಗೆ ತಮ್ಮ ಇಷ್ಟದ ಜಾಗದ ಕುರಿತು ಹೇಳಿದ ನಟಿ, ಬೆಂಗಳೂರಿನ ಬಸವನಗುಡಿ, ಗಾಂಧಿನಗರ ನನ್ನ ಇಷ್ಟದ ಜಾಗ ಎಂದರು. ರೆಡ್ ಸಿಗ್ನಲ್ ಜಂಪ್ ಮಾಡಿದ್ದೀರಾ? ಎಂಬ ಪ್ರಶ್ನೆಗೆ ‘ಹೌದು’ ಎಂದರು. ಕನ್ನಡದ ಸಿನಿಮಾ, ನಟಿರ ಬಗ್ಗೆ ಕೆಳಿದಾಗ ಕನ್ನಡದ ಎಲ್ಲ ನಟಿಯರೂ ಚೆನ್ನಾಗಿದ್ದಾರೆ. ನಾನು ಸಿನಿಮಾ ಅಷ್ಟಾಗಿ ನೋಡಿಲ್ಲ ಎಂದರು.
ಆದರೆ ಸಿನಿಮಾಕ್ಕೆ ಯಾವಾಗ ಮರಳುತ್ತೀರಿ ಮತ್ತು ನೀವು ಈಗ ಎಲ್ಲಿದ್ದೀರಿ ಎಂಬ ಪ್ರಶ್ನೆಗಳಿಗೆ ಮಾತ್ರ ರಮ್ಯಾ ಗಪ್‌ಚುಪ್ ಆಗಿದ್ದಾರೆ. ಸಿನಿಮಾದ ವಿಷಯದ ಬಗ್ಗೆ ಕೇಳಿದಾಗ ‘ಸದ್ಯ ಇಲ್ಲ’ ಅಂತ ಅಷ್ಟೇ ಹೇಳಿ ಹಾರಿಕೆ ಉತ್ತರ ಕೊಟ್ಟ ನಟಿ, ಸದ್ಯ ಎಲ್ಲಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲೇ ಇಲ್ಲ!
ನೀವೂ ನೋಡಿ ನಟಿ ರಮ್ಯಾ ಮಾತು: