‘ನನ್ನ-ಸುಮಲತಾರ ಅಶ್ಲೀಲ ವಿಡಿಯೋ ಮಾಡಲು ಹೊರಟಿದ್ರು ಕುಮಾರಸ್ವಾಮಿ, ಅಂಥ ಕೊಳಕು ಮನಸು ಅವರದ್ದು’

rockline
Published on

ಬೆಂಗಳೂರು: ಸಂಸದೆ, ನಟಿ ಸುಮಲತಾ ಅಂಬರೀಶ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ವಾಗ್ಯುದ್ಧದ ಮಧ್ಯೆ ಪ್ರವೇಶಿಸಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಇದೀಗ ಕುಮಾರಸ್ವಾಮಿ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

‘ನನ್ನ ಮತ್ತು ಸುಮಲತಾ ​ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ನನ್ನ ಮತ್ತು ಸುಮಲತಾ ಅವರ ತೇಜೋವಧೆ ಮಾಡಲು ಹೊರಟಿದ್ದರು, ಸುಮಲತಾ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದರು. ಚುನಾವಣೆಯ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್‌ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ಆರೋಪಿಸಿದರು.

ಚುನಾವಣೆ ವೇಳೆ ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೋ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು. ಅವರ ಚಾನೆಲ್‌ನಲ್ಲಿದ್ದ ಅಂಬರೀಶ್‌ ಅವರ ಅಭಿಮಾನಿಯೇ ಇದನ್ನು ನನಗೆ ಹೇಳಿದ್ದರು ಎಂದು ರಾಕ್‌ಲೈನ್ ಹೇಳಿದರು.

ಕುಮಾರಸ್ವಾಮಿ ಅವರು ಆಡಿಯೋ- ವಿಡಿಯೋ ಬಾಂಬ್ ಎಂದು ಈಗ ಬೆದರಿಕೆ ಹಾಕುತ್ತಿದ್ದಾರೆ. ಅದೇನೂ ಅವರಿಗೆ ಹೊಸತು ಅಲ್ಲ ಎಂದು ಹರಿಹಾಯ್ದರು. ಅವರ ಮನಸ್ಸು ಎಷ್ಟು ಹೊಲಸಾಗಿದೆ ಎಂದು ಇದರಿಂದ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು. ಸುಮಲತಾ ಅವರಿಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಅವರ ಜತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net