ಎಸ್​. ನಾರಾಯಣ್​ಗೆ ಲಾಕ್​ಡೌನ್​ ವರವಾಯಿತಂತೆ ... ಯಾಕೆ?

5D - Narayan
Published on

ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಸಾಕಷ್ಟು ಸಮಸ್ಯೆ ಆಯಿತು, ನಮ್ಮ ಪಾಲಿಗೆ ಶಾಪವಾಯಿತು ಎಂದು ಹಲವರು ಬೇಸರದಿಂದ ಮಾತನಾಡುವುದನ್ನು ಕೇಳಿರಬಹುದು, ನೋಡಿರಬಹುದು. ಆದರೆ, ಹಿರಿಯ ನಿರ್ದೇಶಕ ಎಸ್​. ನಾರಾಯಣ್​ ಅವರಿಗೆ ಮಾತ್ರ ಲಾಕ್​ಡೌನ್​ ವರವಾಯಿತಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

'ಎಲ್ಲರೂ ಲಾಕ್​ಡೌನ್​ಗೆ ಬಯ್ಯುವುದನ್ನು ಕೇಳಿದ್ದೀನಿ. ನನಗೆ ಅದರಿಂದ ತುಂಬಾನೇ ಅನುಕೂಲವಾಯಿತು. ಏಕೆಂದರೆ, ನಾನು ಆ ಸಮಯವನ್ನು ಚೆನ್ನಾಗಿ ಬಳಸಿಕೊಂಡೆ. ಆ ಸಮಯದಲ್ಲಿ ಎಲ್ಲೂ ಹೊರಗೆ ಹೋಗುವ ಹಾಗಿರಲಿಲ್ಲ. ಯಾರದೇ ಸಂಪರ್ಕ ಸಹ ಇರಲಿಲ್ಲ. ಮನೆಯಲ್ಲೇ ಕೂತು ಚೆನ್ನಾಗಿ ಬರೆದೆ. ಈ ಸಮಯದಲ್ಲಿ ನಾಲ್ಕು ವಿಭಿನ್ನ ಕಥೆಗಳನ್ನು ಮಾಡಿಟ್ಟುಕೊಂಡಿದ್ದೇನೆ. ಎಲ್ಲವೂ ವಿಭಿನ್ನ ಜಾನರ್​ಗೆ ಸೇರಿದ ಚಿತ್ರಗಳು' ಎನ್ನುತ್ತಾರೆ ಅವರು.

ಅಂದಹಾಗೆ, ಈ ನಾಲ್ಕರಲ್ಲಿ ಈಗಾಗಲೇ ಅವರು ಒಂದು ಚಿತ್ರವನ್ನು ಈಗಾಗಲೇ ಶುರು ಮಾಡಿದ್ದಾರೆ. ಆದಿತ್ಯ ಮತ್ತು ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ಈಗಾಗಲೇ ಶುರುವಾಗಿದೆ. ಇತ್ತೀಚೆಗೆ ದರ್ಶನ್​ ಸಹ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಸ್ತದ ಒಳಗೆ ಡಿ ಎಂಬ ಇಂಗ್ಲೀಷ್​ ಅಕ್ಷರ ಇರುವುದನ್ನು ನೋಡಿದರೆ, ಚಿತ್ರದ ಹೆಸರು '5ಡಿ' ಇರಬಹುದು ಎಂದನಿಸುತ್ತದೆ. ಆದರೆ, ಚಿತ್ರದ ಶೀರ್ಷಿಕೆ ಏನು ಎಂದು ಎಲ್ಲೂ ಹೇಳುವುದಿಲ್ಲ ಎಂದು ಎಸ್​. ನಾರಾಯಣ್​ ಹೇಳುತ್ತಾರೆ.

'ಚಿತ್ರದ ಶೀರ್ಷಿಕೆ ಬಗ್ಗೆ ಈಗಲೇ ಏನನ್ನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಅದನ್ನು ಬೇಕಾದರೆ '5ಡಿ' ಅಂತ ಬೇಕಾದರೂ ಅಂದುಕೊಳ್ಳಬಹುದು ಅಥವಾ ಬೇರೆ ಏನಾದರೂ ಕರೆಯಬಹುದು. ಅದು ಅವರವರಿಗೆ ಬಿಟ್ಟಿದ್ದು. ಸದ್ಯಕ್ಕೆ ನಾವು ಪೋಸ್ಟರ್​ ಬಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಒಂದೊಂದೇ ಮಾಹಿತಿ ಕೊಡುತ್ತೇನೆ. ಎಲ್ಲವನ್ನೂ ಒಂದೇ ಬಾರಿ ಹೇಳಿದರೆ ಏನೂ ಸ್ವಾರಸ್ಯವಿರುವುದಿಲ್ಲ' ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net