ಸುನೀಲ್ ಈಗ ಮಂಗಲಮ್ ಶ್ರೀನು; ಪುಷ್ಪ ತಂಡದಿಂದ ಬಂತು ರಗಡ್ ಲುಕ್

Pushpa
Published on

ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್​ನಲ್ಲಿ ಸಿದ್ಧವಾಗಿರುವ ‘ಪುಷ್ಪ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಹಾಡು, ಲುಕ್​ಗಳ ಮೂಲಕವೇ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಭಾನುವಾರ ಇದೇ ತಂಡದಿಂದ ಹೊಸ ಲುಕ್ ಬಿಡುಗಡೆ ಆಗಿದೆ. ಇಲ್ಲಿಯವರೆಗೂ ಯಾರೂ ಊಹಿಸದ ಅವತಾರದಲ್ಲಿ ಸುನೀಲ್ ಎದುರಾಗಿದ್ದಾರೆ. ಇಲ್ಲಿಯವರೆಗೂ ಚಿತ್ರದ ಮುಖ್ಯ ಖಳನಾಯಕ ಮಲಯಾಳಂನ ಫಹಾದ್ ಫಾಸಿಲ್ ಎಂದೇ ಹೇಳಲಾಗಿತ್ತು. ಆದರೆ, ಫಹಾದ್ ಜತೆಗೆ ಮುಖ್ಯ ಖಳನ ಪಾತ್ರದಲ್ಲಿ ಸುನೀಲ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಮಂಗಲಮ್ ಶ್ರೀನು ಹೆಸರಿನ ಪಾತ್ರವನ್ನು ಸುನೀಲ್ ಮಾಡಿದ್ದು, ಅವರ ಲುಕ್ ಸಹ ಅಷ್ಟೇ ರಗಡ್ ಆಗಿದೆ. ಇಲ್ಲಿಯವರೆಗೂ ಹಾಸ್ಯನಟನಾಗಿ, ಹೀರೋ ಆಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುನೀಲ್, ಪುಷ್ಪ ಮೂಲಕ ಮತ್ತೊಂದು ಮಗ್ಗುಲಿಗೆ ಹೊರಳಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಡಾಲಿ ಧನಂಜಯ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ಹಿಂದಿಯಲ್ಲಿ ತೆರೆಕಾಣಲ್ಲ ಪುಷ್ಪ?: ದಕ್ಷಿಣದ ನಾಲ್ಕು ಭಾಷೆ ಸೇರಿ ಹಿಂದಿಯಲ್ಲಿಯೂ ‘ಪುಷ್ಪ’ ಸಿನಿಮಾ ತೆರೆಗೆ ಬರಲಿದೆ ಎಂಬುದು ಗೊತ್ತಿರುವ ಸಂಗತಿ. ಇದೀಗ ಹಿಂದಿಯಲ್ಲಿ ಚಿತ್ರ ಬಿಡುಗಡೆ ಆಗುವುದು ಅನುಮಾನ ಎನ್ನಲಾಗುತ್ತಿದೆ. ಹಿಂದಿ ಡಬ್ಬಿಂಗ್ ಹಕ್ಕು ಪಡೆದ ಸಂಸ್ಥೆ ಮತ್ತು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಹಿಂದಿ ಅವತರಣಿಕೆ ತೆರೆಗೆ ಬರುವುದು ವಿಳಂಬವಾಗಲಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net