

ಹೈದರಾಬಾದ್: ದೇಶಾದ್ಯಂತ ಕರೊನಾ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಬೇರೆಬೇರೆ ಭಾಷೆಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ ಎಂದು ಚಿತ್ರತಂಡದಿಂದ ಹೊಸ ಅಪ್ಡೇಟ್ವೊಂದು ಬಂದಿದೆ.
ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಕಳೆದ ವರ್ಷ ಲಾಕ್ಡೌನ್ನಿಂದ ಹಲವು ತಿಂಗಳುಗಳ ಬ್ರೇಕ್ ನೀಡಲಾಗಿತ್ತು. ಲಾಕ್ಡೌನ್ ಮುಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭಿಸಲಾಗಿತ್ತು, ಇನ್ನೇನು ಈ ಬಾರಿ ಚಿತ್ರೀಕರಣ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಲಾಕ್ಡೌನ್ ಶುರುವಾಯಿತು. ಈಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ.
ಈ ಕುರಿತು ಚಿತ್ರದ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಅಪ್ಡೇಟ್ ನೀಡಲಾಗಿದೆ. ಅಷ್ಟೇ ಅಲ್ಲ, ಚಿತ್ರದ ಹೊಸ ಫೋಟೋವೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಫೋಟೋದಲ್ಲಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಜತೆಯಾಗಿ ಕಾಣಿಸಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಬಾಕಿ ಇರುವ ಎರಡು ಹಾಡುಗಳ ಪೈಕಿ ಒಂದರಲ್ಲಿ ರಾಮ್ಚರಣ್ ಮತ್ತು ಆಲಿಯಾ ಭಟ್ ಕಾಣಿಸಿಕೊಂಡರೆ, ಇನ್ನೊಂದರಲ್ಲಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಕಾಣಿಸಿಕೊಳ್ಳಲಿದ್ದಾರಂತೆ. ಬಹುಶಃ ಮುಂದಿನ ಒಂದು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣ ಮುಗಿದು, ಕುಂಬಳಕಾಯಿ ಒಡೆಯುವ ಸಾಧ್ಯತೆ ಇದೆ.
ಈಗಾಗಲೇ, ಚಿತ್ರದ ಇಬ್ಬರೂ ಹೀರೋಗಳು ಎರಡು ಭಾಷೆಗಳ ಡಬ್ಬಿಂಗ್ ಮುಗಿಸಿದ್ದು, ಸದ್ಯದಲ್ಲೇ ಮಿಕ್ಕ ಭಾಷೆಗಳ ಡಬ್ಬಿಂಗ್ ಮುಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ, ಚಿತ್ರವು 2022ರ ಸಂಕ್ರಾಂತಿ ಸಮಯದಲ್ಲಿ ಚಿತ್ರ ಬಿಡುಗಡೆ ಆಗಲಿದೆ.