

ಮುಂಬೈ: ಬಾಲಿವುಡ್ನ ಜನಪ್ರಿಯ ತಾರಾಜೋಡಿಗಳ ಪೈಕಿ ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕೈಫ್ ಸಹ ಒಂದು. ಅವರಿಬ್ಬರೂ 'ವೆಲ್ಕಮ್', 'ನಮಸ್ತೇ ಲಂಡನ್', 'ಸಿಂಗ್ ಈಸ್ ಕಿಂಗ್', 'ಸೂರ್ಯವಂಶಿ' ಮುಂತಾದ ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ತೆರೆಯ ಮೇಲೆ ಅಕ್ಷಯ್ ಜತೆಗೆ ಪ್ರೇಮಿಯಾಗಿ, ಹೆಂಡತಿಯಾಗಿ ಅಭಿನಯಿಸಿದ್ದ ಕತ್ರೀನಾ, ಅದೊಮ್ಮೆ ಅಕ್ಷಯ್ಗೆ ರಾಖಿ ಕಟ್ಟುವುದಕ್ಕೆ ಹೋಗಿದ್ದ ವಿಷಯ ಗೊತ್ತಾ?
ಗೊತ್ತಿಲ್ಲದಿದ್ದರೆ, ಇಲ್ಲಿ ಕೇಳಿ. ಈ ವಿಷಯವನ್ನು ಸ್ವತಃ ಕತ್ರೀನಾ ಕೈಫ್ ಅದೊಮ್ಮೆ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. 'ತೀಸ್ ಮಾರ್ ಖಾನ್' ಚಿತ್ರದ 'ಶೀಲಾ ಕೀ ಜವಾನಿ' ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಅವರು ಅಕ್ಷಯ್ ಕುಮಾರ್ಗೆ ರಾಖಿ ಕಟ್ಟುವುದಕ್ಕೆ ಹೋಗಿದ್ದರಂತೆ. ಆದರೆ, ಅಕ್ಷಯ್ ಕುಮಾರ್ ಕಟ್ಟಿಸಿಕೊಳ್ಳಲಿಲ್ಲವಂತೆ. 'ಯಾಕೆ ಒದೆ ಬೇಕಾ?' ಅಂತ ಕೇಳಿ ಹೊರಟುಹೋದರಂತೆ.
ಈ ಕುರಿತು ಮಾತನಾಡಿದ್ದ ಅವರು, 'ಈ ಜಗತ್ತಿನಲ್ಲಿ ನನಗೆ ಯಾರೂ ಇರಲಿಲ್ಲ. ನನ್ನ ಬಗ್ಗೆ ಯಾರೂ ಗಮನಹರಿಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ಆತ್ಮೀಯವಾಗಿದ್ದವರು ಅಕ್ಷಯ್. ಹಾಗಾಗಿ, ಅವರಿಗೆ ರಾಖಿ ಕಟ್ಟಬೇಕೆನಿಸಿತು. ಹೋಗಿ ಕೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಇದರಲ್ಲಿ ತಪ್ಪೇನಿದೆ' ಎಂದು ಪ್ರಶ್ನಿಸಿದ್ದಾರೆ ಕತ್ರೀನಾ.
ಆಮೇಲೆ ಏನಾಯಿತು ಅಂತ ಕೇಳಿ? ಅದಕ್ಕೂ ಕತ್ರೀನಾ ಉತ್ತರಿಸಿದ್ದಾರೆ. 'ಅಂದು ನನಗೆ ಬಹಳ ಬೇಸರವಾಗಿತ್ತು. ರಾತ್ರಿ ನನ್ನ ಫ್ರೆಂಡ್ ಮನೆಗೆ ಹೊರಟಿದ್ದೆ. ಅಷ್ಟರಲ್ಲಿ ಎದುರಿಗೆ ಅರ್ಜುನ್ ಕಪೂರ್ ಬಂದರು. ಬಹಳ ಕ್ಯೂಟ್ ಆಗಿದ್ದರು. ಸೀದಾ ಹೋಗಿ, 'ಅರ್ಜುನ್ ಇನ್ನು ಮುಂದೆ ನೀನು ನನ್ನ ರಾಖಿ ಸಹೋದರ' ಎಂದೆ. ಅವನು ಓಡಿಹೋದ. ಮರುದಿನ ಮತ್ತೆ ಸಿಕ್ಕಿದ್ದ. ಆಗಲೂ ಅವನ ಹತ್ತಿರ ಹೋಗಿ ಇದೇ ವಿಷಯ ಪ್ರಸ್ತಾಪಿಸಿದೆ. ಆಗಲೂ ಓಡಿಹೋದ' ಎಂದು ಹೇಳಿಕೊಂಡಿದ್ದಾರೆ ಕತ್ರೀನಾ.