100 ಎಕರೆ, 52,000 ಅಡಿಯ ಎಲ್​ಇಡಿ ಸ್ಕ್ರೀನ್! RRR ಪ್ರೀ-ರಿಲೀಸ್ ಇವೆಂಟ್​ನ ವಿಶೇಷತೆ, ಅತಿಥಿಗಳು ಯಾರು?

Published on
ಬೆಂಗಳೂರು: 2022 ರ ಬಹುನಿರೀಕ್ಷಿತ ಸಿನಿಮಾ ‘ಆರ್​ಆರ್​ಆರ್’ ಮಾ.25 ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಇನ್ನು, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ‘ಆರ್​ಆರ್​ಆರ್’ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಹೀಗಾಗಿ, ಈ ಬಹುನಿರೀಕ್ಷಿತ ಚಿತ್ರಕ್ಕೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಪ್ರೀ-ರಿಲೀಸ್ ಇವೆಂಟ್ ಬಗ್ಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೊಣಂಕಿ ಅವರು ಮಾಹಿತಿ ನೀಡಿದ್ದಾರೆ. ವೆಂಕಟ್ ಅವರ ಮಾಹಿತಿಯ ಪ್ರಕಾರ ನಟ ರಾಮ್ ಚರಣ್ ತೇಜ್, ನಟಿ ಆಲಿಯಾ ಭಟ್, ನಟ ಜ್ಯೂ.ಎನ್​ಟಿಆರ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿದ ಹಲವು ಸ್ಟಾರ್ ಕಲಾವಿದರು ಕರುನಾಡಲ್ಲಿ ನಡೆಯಲಿರುವ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಭಾಗಿಯಾಗಲಿದ್ದಾರೆ.
ಅಂದಹಾಗೆ, ಮಾ.19 ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಸಂಜೆ 6 ಗಂಟೆಯಿಂದ ಈ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ, ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡದಲ್ಲೂ ಡಬ್ ಆಗಿ ‘ಆರ್​ಆರ್​ಆರ್’ ರಿಲೀಸ್ ಆಗಲಿದೆ. ''ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡುತ್ತಿರುವುದು ನಮ್ಮ ಹೆಮ್ಮೆ. ಇದು ಕರುನಾಡ ಅತಿ ದೊಡ್ಡ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಆಗಿರಲಿದೆ. ಬೇರೆ ರಾಜ್ಯಗಳಿಂದಲೂ ಇದಕ್ಕೆ ಅಭಿಮಾನಿಗಳು ಬರಲಿದ್ದಾರೆ'', ಎಂದು ಕೊಣಂಕಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
'RRR' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಮೊದಲು ನಮನ ಸಲ್ಲಿಸಲಾಗುತ್ತದೆ. 52 ಸಾವಿರ ಚದರ ಅಡಿಯ ಬೃಹತ್ ಎಲ್​ಇಡಿ ಸ್ಕ್ರೀನ್ ಮತ್ತು 42 ಬೃಹತ್ ಲೇಸರ್ ಲೈಟ್​ಗಳ ದೊಡ್ಡ ವೇದಿಕೆ ಈ ಕಾರ್ಯಕ್ರಮಕ್ಕೆಂದು ಸಿದ್ಧವಾಗುತ್ತಿದೆ ಎನ್ನಲಾಗಿದೆ. ನಟಿ ಅನುಶ್ರೀ, ನಟ ಅಕುಲ್ ಬಾಲಾಜಿ, ತೆಲುಗಿನ ಖ್ಯಾತ ಆ್ಯಂಕರ್ ಸುಮಾ ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಲಿದ್ದಾರೆ. ಇನ್ನು, 2 ಲಕ್ಷ ಜನರು ಈ ಇವೆಂಟ್​ನಲ್ಲಿ ಭಾಗವಹಿಸಲಿದ್ದಾರಂತೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಲೈವ್ ಗಾನ-ಬಜಾನ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಪ್ರೀ-ರಿಲೀಸ್ ಇವೆಂಟ್​ಗೆ ಅಭಿಮಾನಿಗಳಿಗೂ ಮುಕ್ತ ಆಹ್ವಾನ ನೀಡಲಾಗಿದ್ದು, ಕೆವಿಎನ್ ಸಂಸ್ಥೆಯ WWW.KVNProductions.co.in ವೆಬ್ ಸೈಟ್ ಮೂಲಕ ಕಾರ್ಯಕ್ರಮಕ್ಕೆ ಎಂಟ್ರಿ ಪಾಸ್​ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net