ಒಂದು ಬಿಲಿಯನ್​ ಹಿಟ್ಸ್​ ಪಡೆದು ಹೊಸ ದಾಖಲೆ ಬರೆದ 'ರೌಡಿ ಬೇಬಿ'

Rowday Baby - Final
Published on

ಚೆನ್ನೈ: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಧನುಷ್​ ಮತ್ತು ಸಾಯಿಪಲ್ಲವಿ ಅಭಿನಯದ 'ಮಾರಿ 2' ಚಿತ್ರವು ಬಾಕ್ಸ್​ ಆಫೀಸ್​​ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಆಗದಿರಬಹುದು. ಆದರೆ, ಆ ಚಿತ್ರದ 'ರೌಡಿ ಬೇಬಿ' ಹಾಡು ಸೂಪರ್​ ಹಿಟ್​ ಆಗಿರುವುದಷ್ಟೇ ಅಲ್ಲ, ಹೊಸ ದಾಖಲೆ ಬರೆದಿದೆ.

'ರೌಡಿ ಬೇಬಿ' ಹಾಡು ಯೂಟ್ಯೂಬ್​ನಲ್ಲಿ ಒಂದು ಬಿಲಿಯನ್​ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಾಡನ್ನು ಧನುಷ್​ ಮತ್ತು ಧೀ ಹಾಡಿದ್ದು, ದಾಖಲೆ ಮಾಡಿರುವ ವಿಚಾರ ಸೋಮವಾರ ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿರುವ ನಟ ಮತ್ತು ಗಾಯಕ ಧನುಷ್, 'ನಾನು ಹಾಡಿದ್ದ 'ಕೊಲವೆರಿ ಡಿ' ಹಾಡಿಗೆ ಇದೀಗ ಒಂಬತ್ತು ವರ್ಷ ತುಂಬಿದೆ. ಈ ಒಂಬತ್ತನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲೇ ನನ್ನ ಇನ್ನೊಂದು ಹಾಡು ಒಂದು ಬಿಲಿಯನ್​ ವ್ಯೂಸ್​ ಪಡೆಯುವುದರ ಜತೆಗೆ, ಅಷ್ಟೊಂದು ವೀಕ್ಷಣೆಗೆ ಒಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಇನ್ನಷ್ಟು ಖುಷಿ ಹೆಚ್ಚಿಸಿದೆ' ಎಂದು ಹೇಳಿದ್ದಾರೆ.

ಬರೀ ಧನುಷ್​ ಅಷ್ಟೇ ಅಲ್ಲ, ಅವರ ಜತೆಗೆ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಸಾಯಿಪಲ್ಲವಿ, ಸಹ ಹಾಡನ್ನು ಜನಪ್ರಿಯಗೊಳಿಸಿದ್ದಿಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net