

90ರ ದಶಕದ ಅತ್ಯಂತ ಜನಪ್ರಿಯ ನಟಿ ಎಂದರೆ ಅದು ರೋಜಾ. ಬರೀ ತೆಲುಗು ಅಷ್ಟೇ ಅಲ್ಲ, ಕನ್ನಡ ಮತ್ತು ತಮಿಳಿನ ಕೆಲವು ಚಿತ್ರಗಳಲ್ಲೂ ಅವರು ನಟಿಸಿದ್ದರು. ಆ ನಂತರ ಮದುವೆ, ಮನೆ, ಮಕ್ಕಳು ಅಂತ ಬಿಜಿಯಾದ ರೋಜಾ, ಈಗಂತೂ ಪಾಲಿಟಿಕ್ಸ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಎಲ್ಲಾ ಸರಿ, ಒಮ್ಮೆ ಬಣ್ಣ ಹಚ್ಚಿದವರು, ಸಹಜವಾಗಿಯೇ ಈ ವೃತ್ತಿಯಲ್ಲಿ ಮುಂದುವರೆಯುತ್ತಾರೆ. ರೋಜಾಗೆ ಅಂತಹ ಆಸಕ್ತಿ ಇಲ್ಲವಾ ಎಂಬ ಪ್ರಶ್ನೆ ಬರಬಹುದು. ರೋಜಾಗೂ ಮತ್ತೆ ನಟಿಸಬೇಕು ಎಂಬ ಆಸೆ ಇದೆಯಂತೆ. ಆದರೆ, ಅವರದ್ದೊಂದು ಕಂಡೀಷನ್ ಇದೆ.
ಇಷ್ಟಕ್ಕೂ ರೋಜಾ ಅವರ ಕಂಡೀಷನ್ ಏನು? ಈ ಕುರಿತು ಅವರೇ ಮಾತನಾಡಿದ್ದಾರೆ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು, ಮತ್ತೆ ಯಾವಾಗ ನೀವು ಸಿನಿಮಾದಲ್ಲಿ ನಟಿಸೋದು ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು ನಟಿಸೋದಕ್ಕೆ ತಾನು ರೆಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಚಿರಂಜೀವಿ ಮತ್ತು ನಾಗಾರ್ಜುನ ಇಬ್ಬರಲ್ಲೊಬ್ಬರ ಜತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಮಾತ್ರ ನಟಿಸುವುದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ, ಅಂದರೆ ಈ ವರ್ಷದ ಆರಂಭದಲ್ಲಿ, ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರವೊಂದರಲ್ಲಿ ರೋಜಾ ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. ಬೋಯಪಾಟಿ ಸೀನು ನಿರ್ದೇಶನದ ಈ ಚಿತ್ರದಲ್ಲಿ ರೋಜಾ ಅವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು.
ಆದರೆ, ರೋಜಾ ಮಾತ್ರ ಇದಕ್ಕೆ ಪ್ರತಿಕ್ರಿಯಿಸುವುದಕ್ಕೆ ಹೋಗಿರಲಿಲ್ಲ. ಈಗಿನ ಅವರ ಹೇಳಿಕೆ ನೋಡಿದರೆ, ನಂದಮೂರಿ ಬಾಲಕೃಷ್ಣ ಅಭಿನಯದ ಚಿತ್ರದಲ್ಲಿ ಅವರು ನಟಿಸುತ್ತಿರುವುದು ಸುಳ್ಸುದ್ದಿ ಎಂದನಿಸುತ್ತಿದೆ.
ಹಾಗಾದರೆ, ರೋಜಾ ಮತ್ತೆ ಬಣ್ಣ ಹಚ್ಚುವುದು ಯಾವಾಗ? ಇದು ಚಿರಂಜೀವಿ ಮತ್ತು ನಾಗಾರ್ಜುನ ಅವರ ಮೇಲೆ ಅವಲಂಬಿತವಾಗಿದ್ದು, ಅವರು ಎಸ್ ಎಂದರೆ, ರೋಜಾ ಮತ್ತೆ ನಟಿಸುವ ಸಾಧ್ಯತೆ ಇದೆ.