

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್, ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಬಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ವಿಷಯ ಹೊಸದೇನಲ್ಲ.
ಈಗಾಗಲೇ ಈ ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಸಾರಾ ಸಾಕಷ್ಟು ಮಾತನಾಡಿದ್ದಾರೆ. ಆದರೆ, ಇಷ್ಟಕ್ಕೂ ಈ ಪಾತ್ರ ಅವರಿಗೆ ಹೇಗೆ ಸಿಕ್ಕಿತು ಎಂಬ ವಿಷಯವನ್ನು ಅವರು ಹೇಳಿಕೊಂಡಿಲ್ಲ. ಆದರೆ, ಆ ವಿಷಯವನ್ನು ನಿರ್ದೇಶಕ ರೋಹಿತ್ ಶೆಟ್ಟಿ, 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಹೇಳಿಕೊಂಡಿದ್ದು, ಈಗ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಸಾರಾ-ಸುಶಾಂತ್ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು ಯಾಕೆ?
ಇಷ್ಟಕ್ಕೂ ಸಾರಾಗೆ ಆ ಪಾತ್ರ ಸಿಕ್ಕಿದ್ದು ಹೇಗೆ? 'ಅದೊಂದು ದಿನ ಸಾರಾ ನನ್ನ ಆಫೀಸಿಗೆ ಒಬ್ಬರೇ ಬಂದರು. ನನ್ನ ಎದುರಿಗೆ ನಿಂತು, ದಯವಿಟ್ಟು ನನಗೆ ಏನಾದರೂ ಕೆಲಸ ಕೊಡಿ ಎಂದು ಬೇಡಿಕೊಂಡರು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮಗಳು ಈ ರೀತಿ ಬಂದು ಕೇಳಿದ್ದು ನೋಡಿ, ನನಗೆ ನಿಜಕ್ಕೂ ಕಣ್ಣೀರು ಬಂತು. ತಕ್ಷಣವೇ 'ಸಿಂಬಾ' ಚಿತ್ರದಲ್ಲಿ ಆಕೆಗೆ ನಾಯಕಿ ಪಾತ್ರ ಕೊಡುವುದಕ್ಕೆ ಒಪ್ಪಿಕೊಂಡೆ' ಎಂದು ಹೇಳಿಕೊಂಡಿದ್ದಾರೆ ರೋಹಿತ್.
ಈ ಮಾತನ್ನು ಅವರು ಹೇಳಿ ಒಂದು ವರ್ಷವೇ ಆಗಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತು ಜೋರಾಗಿ ಚರ್ಚೆ ನಡೆಯುತ್ತಿದ್ದು, ಈಗ ಈ ಹಳೆಯ ವಿಡಿಯೋ ಇಟ್ಟುಕೊಂಡು ಜನ ರೋಹಿತ್ಗೆ ಬೆವರಿಳಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಒಬ್ಬರು, 'ಪ್ರತಿದಿನ ಸಾವಿರ ಜನ ಅವಕಾಶ ಕೊಡಿ ಎಂದು ಬೇಡಿಕೊಂಡು ಬರುತ್ತಾರೆ. ಅದರಲ್ಲಿ ಎಲ್ಲರೂ ರಿಜೆಕ್ಟ್ ಆಗುತ್ತಾರೆ. ಸ್ಟಾರ್ ಮಕ್ಕಳು ಎಂದ ಮಾತ್ರಕ್ಕೆ ರೋಹಿತ್ ತರಹದವರು ಎಷ್ಟು ಬೇಗ ಕೆಲಸ ಕೊಡುತ್ತಾರೆ ನೋಡಿ' ಎಂದಿದ್ದಾರೆ.
ಇನ್ನೊಬ್ಬರು, 'ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇರುವವರು ಮತ್ತು ಅದಕ್ಕೆ ಸರಿಯಾಗಿ ಅವಕಾಶವಿಲ್ಲದವರು, ನೇರವಾಗಿ ರೋಹಿತ್ ಶೆಟ್ಟಿ ಆಫೀಸಿಗೆ ಹೋಗಿ. ಅವರೆದುರು ನಿಂತು, ಕೈಮುಗಿದು ಕೆಲಸ ಕೊಡುವುದಕ್ಕೆ ಬೇಡಿಕೊಳ್ಳಿ. ಕೆಲಸ ಸಿಗುತ್ತದೆ. ಅದಕ್ಕೆ ಪ್ರತಿಭೆ ಬೇಕು ಅಂತೇನಿಲ್ಲ' ಎಂದು ಲೇವಡಿ ಮಾಡಿದ್ದಾರೆ.