

ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಕರೊನಾ ಹಾವಳಿಯಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿತ್ತು. ಚಿತ್ರತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳೂ ಖುಷ್ ಆದರು. ಆದರೆ, ಇನ್ನೊಂದು ಕಡೆ ಅಷ್ಟೇ ಬೇಸರವೂ ಆಗಿತ್ತು. ಮತ್ತೊಂದು ಟೀಸರ್ ಅಥವಾ ಹಾಡನ್ನು ಬಿಡುವಂತೆ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಅಭಿಮಾನಿಗಳ ಕೋರಿಕೆಯಂತೆ ಹಾಡು, ಪೋಸ್ಟರ್ಗಳು ಬಿಡುಗಡೆ ಆದವು. ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ.
ಹೌದು, ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ರಾಬರ್ಟ್ ತಂಡದಿಂದ ಹೊಸ ಪೊಸ್ಟರ್ ಬಿಡುಗಡೆಯಾಗಿದ್ದು, ಮಾಸ್ ಅವತಾರದಲ್ಲಿ ದರ್ಶನ್ ಎದುರಾಗಿದ್ದಾರೆ. ಕೈಯಲ್ಲಿ ಗಿಟಾರ್ ಹಿಡಿದ ಭಂಗಿಯಲ್ಲಿ ದರ್ಶನ್ ಕಾಣಿಸಿಕೊಂಡು, ಪೋಸ್ಟರ್ ಮೂಲಕವೇ ನಿರ್ಮಾಪಕರಿಗೆ ಶುಭಾಶಯ ಕೋರಿದೆ ಚಿತ್ರತಂಡ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಿತ್ರತಂಡಕ್ಕಿಂತ ಹೆಚ್ಚಾಗಿ ಅಭಿಮಾನಿಗಳೇ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ದರ್ಶನ್ ಫ್ಯಾನ್ಸ್ ರಾಬರ್ಟ್ ಸಿನಿಮಾ ಪೋಸ್ಟರ್ ಇರುವ ಮಾಸ್ಕ್ಗಳನ್ನು ಸಿದ್ಧಪಡಿಸಿದ್ದಾರೆ. ಈ ಮಾಸ್ಕ್ಗಳನ್ನು ಮಾರಾಟ ಮಾಡಲಾಗುತ್ತಿದೆಯಾ ಅಥವಾ ಕೇವಲ ಫ್ರೀಯಾಗಿ ಹಂಚಲಾಗುತ್ತಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.