

ಬೆಂಗಳೂರು: ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು ‘ಏಪ್ರಿಲ್’ ಚಿತ್ರತಂಡ. ರಚಿತಾ ರಾಮ್ ನಾಯಕಿಯಾಗಿದ್ದ ಆ ಸಿನಿಮಾ ಬಳಗಕ್ಕೆ ಚಿರಂಜೀವಿ ಸರ್ಜಾ ಸಹ ಎಂಟ್ರಿ ಕೊಟ್ಟಿದ್ದರು. ಅವರ ಫೋಟೋಶೂಟ್ ಸಹ ಅಷ್ಟೇ ಕೌತುಕಮಯವಾಗಿತ್ತು. ಇನ್ನೇನು ಶೂಟಿಂಗ್ಗೆ ಸಿದ್ಧವಾಗಬೇಕೆನ್ನುವಷ್ಟರಲ್ಲಿ ಚಿರು ಅಕಾಲಿಕ ಸಾವು ಎಲ್ಲರನ್ನೂ ಶಾಕ್ಗೆ ದೂಡಿತ್ತು. ಇದೀಗ ಇದೇ ‘ಏಪ್ರಿಲ್’ ತಂಡ ಒಂದು ದೊಡ್ಡ ಬದಲಾವಣೆ ಮಾಡಿಕೊಂಡು ಬರುವುದಕ್ಕೆ ಸಿದ್ಧತೆ ನಡೆಸುತ್ತಿದೆ.
ಈ ಮೊದಲು ಸಿನಿಮಾ ಘೋಷಣೆ ಆದಾಗ ಅಲ್ಲಿ ರಚಿತಾ ನಾಯಕಿಯಾಗಿದ್ದರು. ಇದೊಂದು ನಾಯಕಿ ಪ್ರಧಾನ ಚಿತ್ರ ಎಂದು ಹೇಳಲಾಗಿತ್ತು. ಅದಾದ ಬಳಿಕ ಚಿರು ಚಿತ್ರತಂಡ ಸೇರಿಕೊಂಡಿದ್ದರಿಂದ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು ನಿರ್ದೇಶಕ ಸತ್ಯ ರಾಯಲ. ಮತ್ತೆ ಮತ್ತೆ ಒಂದಷ್ಟು ತಿದ್ದುಪಡಿಗಳು ಆಗುತ್ತಲೇ ಹೋದವು. ಇದೀಗ, ಚಿರಂಜೀವಿ ಅವರ ನಿಧನದಿಂದಾಗಿ, ಆ ನಂತರ ಮಾಡಿಕೊಂಡ ಕಥೆಯನ್ನು ಬಿಟ್ಟು, ಮೊದಲು ಮಾಡಿಟ್ಟುಕೊಂಡ ಕಥೆಗೆ ಮರಳುವ ಸೂಚನೆ ನೀಡಿದ್ದಾರೆ ನಿರ್ದೇಶಕರು. ಆ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ.
‘ಚಿರು ನಿಧನದ ಬಳಿಕ ನಮ್ಮ ಇಡೀ ತಂಡ ಮಾತನಾಡಿಕೊಂಡು, ನಾಯಕನ ಪಾತ್ರ ಕೈಬಿಟ್ಟು, ನಾಯಕಿ ಪ್ರಧಾನ ಸಿನಿಮಾ ಮಾಡುವ ಬಗ್ಗೆ ವಿಚಾರ ಮಾಡಿದ್ದೇವೆ. ಇನ್ನು ಚಿರು ಪಾತ್ರವನ್ನು ಬೇರೆಯವರ ಕಡೆಯಿಂದ ಮಾಡಿಸುವ ಬಗ್ಗೆ ಚಿತ್ರತಂಡಕ್ಕೆ ಮನಸ್ಸಿಲ್ಲ. ಹಾಗಾಗಿ ಆರಂಭದಲ್ಲಿ ಏನೆಲ್ಲ ಪ್ಲಾ್ಯನ್ ಆಗಿತ್ತೋ ಮತ್ತದೇ ಹಾದಿಗೆ ಚಿತ್ರತಂಡ ಮರಳುತ್ತಿದೆ. ರಚಿತಾ ಅವರೇ ನಾಯಕಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ವಪಕರೂ ಅದೇ ಸೂಕ್ತ ಎನ್ನುತ್ತಿದ್ದಾರೆ’ ಎನ್ನುತ್ತಾರೆ ಅವರು.
ಮುಂದಿನ ಮೂರು ತಿಂಗಳ ಬಳಿಕವಷ್ಟೇ ಸಿನಿಮಾ ಬಗ್ಗೆ ಕ್ಲಿಯರ್ ಪಿಕ್ಚರ್ ಸಿಗಲಿದೆ ಎನ್ನುವ ಸತ್ಯ, ‘ಸದ್ಯ ಮುಂದೇನು ಎಂಬುದಕ್ಕೆ ಇನ್ನೊಂದು ವಾರದ ಬಳಿಕ ಉತ್ತರ ಸಿಗಲಿದೆ. ಶೂಟಿಂಗ್ ವಿಚಾರಕ್ಕೆ ಬರುವುದಾದರೆ, ಯಾವಾಗ ಶುರು ಆಗುತ್ತದೆ ಎಂಬುದು ಈಗಲೇ ಹೇಳುವುದು ಕಷ್ಟ’ ಎಂದು ಉತ್ತರಿಸುತ್ತಾರೆ ಸತ್ಯ ರಾಯಲ.