ಪೂರ್ಣಿಯಾದಲ್ಲಿ ರಸ್ತೆಗೆ ಸುಶಾಂತ್ ಹೆಸರು

Final - Sushant Road
Published on

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು, ಈ 14ಕ್ಕೆ ಒಂದು ತಿಂಗಳಾಗುತ್ತಿದೆ. ಈ ಮಧ್ಯೆ, ಅವರ ಹುಟ್ಟೂರಿನ ರಸ್ತೆಯೊಂದಕ್ಕೆ, ಅವರ ಹೆಸರನ್ನು ಇಟ್ಟು ಅಭಿಮಾನ ಮೆರೆಯಲಾಗಿದೆ.

ಸುಶಾಂತ್ ಇತ್ತೀಚಿನ ವರ್ಷಗಳಲ್ಲಿ ಮುಂಬೈನಲ್ಲಿ ನೆಲೆಸಿದ್ದರೂ, ಮೂಲತಃ ಬಿಹಾರದವರು. ಅಲ್ಲಿಂದ ಮುಂಬೈಗೆ ಬಂದು ವೃತ್ತಿಬದುಕು ಕಟ್ಟಿಕೊಂಡರು. ಆದರೆ, ಒಂದಿಷ್ಟು ಚಿತ್ರಗಳಲ್ಲಿ ನಟಿಸಿ, ಒಳ್ಳೆಯ ಹೆಸರು ಸಂಪಾದಿಸಿರುವಾಗಲೇ, ಕಾರಣಾಂತರಗಳಿಂದ ಆತ್ಮಹತ್ಯೆ ಮಾಡಿಕೊಂಡು ಇನ್ನಿಲ್ಲವಾಗಿದ್ದಾರೆ.

ಸುಶಾಂತ್ ಅವರ ಆತ್ಮಹತ್ಯೆಯ ನಂತರ ಬಿಹಾರದಲ್ಲಿ ಸಾಕಷ್ಟು ಗಲಾಟೆಗಳಾಗಿದ್ದವು. ಬಾಲಿವುಡ್‍ನ ಕೆಲವು ಪ್ರಭಾವೀ ವ್ಯಕ್ತಿಗಳಾದ ಕರಣ್ ಜೋಹರ್, ಸಲ್ಮಾನ್ ಖಾನ್ ಮುಂತಾದವರು ಅವರನ್ನು ಕಡೆಗಣಿಸಿದ್ದರಿಂದಲೇ, ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂದು ಅಭಿಮಾನಿಗಳು ಗಲಾಟೆ ಮಾಡಿದ್ದರು. ಸಲ್ಮಾನ್, ಕರಣ್ ಮುಂತಾದವರ ಪೋಸ್ಟರ್‍ಗಳಿಗೆ ಬೆಂಕಿ ಹಚ್ಚಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಇದೀಗ ಅವರ ಹುಟ್ಟೂರಾದ ಪೂರ್ಣಿಯಾದಲ್ಲಿ ರಸ್ತೆಯೊಂದಕ್ಕೆ, ಸುಶಾಂತ್ ಸಿಂಗ್ ರಜಪೂತ್ ಅವರ ಹೆಸರನ್ನು ಇಡುವುದರ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮಧುಬನಿಯಿಂದ ಮಾತಾ ಚೌಕ್‍ಗೆ ಸಾಗುವ ಈ ರಸ್ತೆಯನ್ನು ಶುಕ್ರವಾರ ಮೇಯರ್ ಸವಿತಾ ದೇವಿ ಲೋಕಾರ್ಪಣೆ ಮಾಡಿದರು. ಇನ್ನು ಮುಂದೆ ಈ ರಸ್ತೆಯನ್ನು ಸುಶಾಂತ್ ಸಿಂಗ್ ರಜಪೂತ್ ಚೌಕ್ ಎಂದು ಕರೆಯಲಾಗುತ್ತದೆ.

ಅದಲ್ಲದೆ, ಸುಶಾಂತ್ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಸವಿತಾ ದೇವಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಇರ್ಫಾನ್ ಖಾನ್ ಅವರ ಸಾವಿನ ನಂತರ ಮಹಾರಾಷ್ಟ್ರದಲ್ಲೂ ಒಂದು ರಸ್ತೆಗೆ ಅವರ ಹೆಸರನ್ನು ಇಡಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net