ರಿಷಿ ಮತ್ತು ರಣಬೀರ್​ಗೆ ಅಪ್ಪ-ಮಗನಾಗುವುದಕ್ಕೆ ಸಾಧ್ಯವಾಗಲೇ ಇಲ್ಲ!

Rishi Kapoor and Ranbir Kapoor - Final
Published on

ಮುಂಬೈ: ಕೆಲವು ತಿಂಗಳುಗಳ ಹಿಂದೆ ನಿಧನರಾದ ಬಾಲಿವುಡ್​ ನಟ ರಿಷಿ ಕಪೂರ್​ ಅವರು ಲಾಕ್​ಡೌನ್​ಗೂ ಮುನ್ನ ಒಂದಿಷ್ಟು ಕಥೆಗಳನ್ನು ಕೇಳಿದ್ದರು. ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಉತ್ಸುಕರಾಗಿದ್ದರು. ಆದರೆ, ಅವರ ನಿಧನದಿಂದಾಗಿ ಆ ಎಲ್ಲಾ ಚಿತ್ರಗಳು ಇದೀಗ ನಿಂತು ಹೋಗಿವೆ.

ಈ ಪೈಕಿ ಒಂದು ಚಿತ್ರದಲ್ಲಿ ರಿಷಿ ಅಷ್ಟೇ ಅಲ್ಲ, ಅವರ ಮಗ ರಣಬೀರ್​ ಕಪೂರ್​ ಸಹ ನಟಿಸಬೇಕಿತ್ತಂತೆ. ರಿಷಿ ಮತ್ತು ರಣಬೀರ್​ ಜತೆಯಾಗಿ ನಟಿಸಬೇಕು ಎಂದು ಅವರಿಬ್ಬರ ಅಭಿಮಾನಿಗಳ ಹಲವು ವರ್ಷಗಳ ಆಸೆ.

ಈ ಹಿಂದೆ ಅವರಿಬ್ಬರೂ 'ಬೇಷರಮ್​' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದರೂ, ಚಿತ್ರ ಯಶಸ್ವಿಯಾಗಲಿಲ್ಲ. ಆ ನಂತರ ಇಬ್ಬರೂ ಒಂದೊಳ್ಳೆಯ ಚಿತ್ರದಲ್ಲಿ ಜತೆಯಾಗಿ ನಟಿಸಬೇಕು ಎಂದು ಕಾಯುತ್ತಿದ್ದರು.

ಅಂಥದ್ದೊಂದು ಸಂದರ್ಭ ಈ ವರ್ಷದಲ್ಲಿ ಬಂದಿತ್ತಂತೆ. ಕಳೆದ ವರ್ಷ ಬಿಡುಗಡೆಯಾದ ಗುಜರಾತಿಯ ಸೂಪರ್​ ಹಿಟ್​ ಚಿತ್ರ 'ಚಾಲ್​ ಜೀವಿ ಲಾಯೆ' ಎಂಬ ಚಿತ್ರವನ್ನು ಹಿಂದಿಗೆ ರೀಮೇಕ್​ ಮಾಡಬೇಕು ಎಂದು ಕೋಕೋನಟ್​ ಮೋಷನ್​ ಪಿಕ್ಚರ್ಸ್​ನವರು ಪ್ರಯತ್ನ ನಡೆಸಿದ್ದರಂತೆ.

ಈ ಚಿತ್ರದಲ್ಲಿ ರಿಷಿ ಕಪೂರ್​ ಅವರು ನಟಿಸಿದರೆ ಚೆನ್ನ ಎಂದು ಅವರನ್ನು ಸಂಪರ್ಕಿಸಿದ್ದರಂತೆ. ಚಿತ್ರ ನೋಡಿ ಖುಷಿಪಟ್ಟಿದ್ದ ರಿಷಿ, ಈ ಚಿತ್ರದಲ್ಲಿ ತಮ್ಮ ಮಗನಿಗೂ ನಟಿಸುವುದಕ್ಕೆ ಹೇಳುವುದಾಗಿ ಹೇಳಿದ್ದರಂತೆ.

ಇದೆಲ್ಲಾ ಆಗಿದ್ದು, ಈ ವರ್ಷದ ಮಾರ್ಚ್​​ನಲ್ಲಿ. ಇನ್ನೇನು ಮಾತುಕತೆ ಮುಂದುವರೆಯಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಆಗಿದೆ. ಅದಾಗಿ ಎರಡು ತಿಂಗಳಲ್ಲಿ ರಿಷಿ ಕಪೂರ್​ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೀಗಾಗಿ ಈ ಚಿತ್ರ ಶುರುವಾಗುವುದಕ್ಕೆ ಮುಂಚೆಯೇ ನಿಂತು ಹೋಗಿದೆ.

ಅಂದಹಾಗೆ, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರದಲ್ಲೂ ರಿಷಿ ಕಪೂರ್​ ಮತ್ತು ರಣಬೀರ್​ ಕಪೂರ್​ ಇಬ್ಬರೂ ಅಪ್ಪ-ಮಗನಾಗಿಯೇ ಕಾಣಿಸಿಕೊಳ್ಳಬೇಕಿತ್ತು. ಮುಂದೊಮ್ಮೆ ಈ ಚಿತ್ರ ಬಿಡುಗಡೆಯಾದರೂ ಅದರಲ್ಲಿ ರಿಷಿ ಕಪೂರ್ ಇರುವುದಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net