

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಪ್ಯಾನ್ ಇಂಡಿಯಾ ಸದ್ದು ಮಾಡಿತ್ತು. ಕಡಿಮೆ ಬಜೆಟ್ ಚಿತ್ರಗಳೂ ಹೊಸ ವಿಷಯ, ವಿಭಿನ್ನ ಕಥೆಯಿದ್ದರೆ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಬಹುದು ಎಂದು ಸಾಬೀತುಪಡಿಸಿತ್ತು. ಚಿತ್ರದ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ, ಕಥೆಯ ಪ್ರೀಕ್ವಲ್ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕೆ ಬೇಕಾದ ಸಂಶೋಧನೆ, ಮಾಹಿತಿ ಕಲೆ ಹಾಕಲು ಮೂರ್ನಾಲ್ಕು ತಿಂಗಳು ಓಡಾಡಿದ್ದರು. ಇದೀಗ ಪ್ರಿ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ನಾಳೆ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ. ಜತೆಗೆ ಮಧ್ಯಾಹ್ನ 12.25ಕ್ಕೆ ಚಿತ್ರದ ಮೊದಲ ನೋಟ ಬಿಡುಗಡೆ ಮಾಡುವುದಾಗಿ ಖುದ್ದು ರಿಷಬ್ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಮೂರು ಕಾಲಮಿತಿಯಲ್ಲಿ ಕಥೆ ಸಾಗಿತ್ತು. 1847, 1970 ಹಾಗೂ 1990ರ ಅವಧಿಯ ಕಥೆ ಹೇಳಲಾಗಿತ್ತು. ಇದೀಗ ಪ್ರೀಕ್ವಲ್ನಲ್ಲಿ ರಿಷಬ್ ಶೆಟ್ಟಿ ದೈವಗಳ ಹುಟ್ಟಿನ ಕುರಿತ ಕಥೆ ಹೇಳಲಿದ್ದಾರೆ ಎನ್ನಲಾಗಿದೆ.
ಏಳು ಭಾಷೆಗಳಲ್ಲಿ ಸಿನಿಮಾ
‘ಕಾಂತಾರ’ ಪ್ರೀಕ್ವಲ್ಗೆ ‘ಒಂದು ದಂತಕಥೆ : ಅಧ್ಯಾಯ - 1’ ಎಂಬ ಅಡಿಬರಹವಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಅಧ್ಯಾಯ 2, 3 ರೀತಿ ಸಿನಿಮಾ ಕಥೆ ಮುಂದುವರಿಯುತ್ತಾ ಎಂಬ ಕುತೂಹಲ ಮೂಡಿಸಿದೆ. ಆದರೆ, ಈ ಬಗ್ಗೆ ರಿಷಬ್ ಎಲ್ಲಿಯೂ ಗುಟ್ಟುಬಿಟ್ಟುಕೊಟ್ಟಿಲ್ಲ. ಜತೆಗೆ ‘ಕಾಂತಾರ’ ಮೊದಲ ಭಾಗ ಕನ್ನಡದಲ್ಲಿ 2022ರ ಸೆ. 30ರಂದು ಮೊದಲು ರಿಲೀಸ್ ಆಗಿತ್ತು.
ಕನ್ನಡದಲ್ಲಿ ಸಿಕ್ಕ ರೆಸ್ಪಾನ್ಸ್ನಿಂದ ಖುಷಿಯಾದ ಚಿತ್ರತಂಡ ಅ. 14ರಂದು ಹಿಂದಿ, ಅ. 15ರಂದು ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ಕಳೆದ ಡಿ. 2ರಂದು ತುಳು ಭಾಷೆಯಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗಿತ್ತು. ಹೀಗೆ ಮೊದಲ ಭಾಗ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದರೆ, ಇದೀಗ ಪ್ರೀಕ್ವಲ್ಅನ್ನು ಚಿತ್ರತಂಡ ಏಳು ಭಾಷೆಗಳಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಜತೆಗೆ ಬೆಂಗಾಲಿ ಮತ್ತು ಇಂಗ್ಲೀಷ್ನಲ್ಲೂ ‘ಅಧ್ಯಾಯ 1’ ಬಿಡುಗಡೆಯಾಗಲಿದೆ.